ಆ್ಯಂಟಿಗಾ:ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಜಯ ಗಳಿಸಿದೆ.ಈ ಗೆಲುವಿನೊಂದಿಗೆ ಭಾರತದ ಸೆಮಿಫೈನಲ್ ಹಾದಿ ಸುಗಮವಾಗಿದೆ. ಇಲ್ಲಿನ ರಿಚರ್ಡ್ಸನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು 50 ರನ್ ಅಂತರದಲ್ಲಿ ಸೋಲಿಸಿ ಈ ಟಿ20 ವಿಶ್ವಕಪ್ನಲ್ಲಿ ಅಜೇಯ ಓಟವನ್ನು ಮುಂದುವರಿಸಿದೆ.
ಟಾಸ್ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ
ಭಾರತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತೀಯ ಬೌಲರ್ಗಳ ಕರಾರುವಕ್ಕಾದ ಬೌಲಿಂಗ್ ಮುಂದೆ ಬಾಂಗ್ಲಾದೇಶ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು.ಬಾಂಗ್ಲಾ ಪರ ಟಿ.ಹಸನ್ 29 ರನ್, ಕೊನೆಯಲ್ಲಿ ರಿಶಾದ್ ಹೊಸೈನ್ 3 ಸಿಕ್ಸರ್ ಸಹೀತ 10 ಎಸೆತಗಳಲ್ಲಿ 24 ರನ್ ಬಾರಿಸಿದರು. ಭಾರತ ಪರ ಕುಲ್ದೀಪ್ ಯಾದವ್ 4 ಓವರ್ಗಳಲ್ಲಿ 19ರನ್ ನೀಡಿ 3 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ ಮತ್ತೊಮ್ಮೆ ಬಿಗು ದಾಳಿ ನಡೆಸಿ 4 ಓವರ್ಗಳಲ್ಲಿ 13 ರನ್ ನೀಡಿ 2 ವಿಕೆಟ್ ಉರುಳಿಸಿದರು. ಅರ್ಷದೀಪ್ ಸಿಂಗ್ 2, ಹಾರ್ದಿಕ್ ಪಾಂಡ್ಯ 1 ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಭಾರತ ಹಾರ್ದಿಕ್ ಪಾಂಡ್ಯ ಬಿರುಸಿನ ಅರ್ಧ ಶತಕದ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಪಾಂಡ್ಯ 27 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ನೆರವಿನಿಂದ ಅಜೇಯ 50 ರನ್ ಬಾರಿಸಿದರು. ವಿರಾಟ್ ಕೊಹ್ಲಿ 28 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 37 ರನ್ ಬಾರಿಸಿದರು, ರಿಷಭ್ ಪಂತ್ 24 ಎಸೆತಗಳಲ್ಲಿ 4 ಬೌಂಡರಿ ಎರಡು ಸಿಕ್ಸರ್ ನೆರವಿನಿಂದ 36 ರನ್ ಬಾರಿಸಿದರೆ, ಶಿವಂ ದುಬೆ 24 ಎಸೆತಗಳಲ್ಲಿ 3 ಸಿಕ್ಸರ್ ನೆರವಿನಿಂದ 34 ರನ್ ಬಾರಿಸಿದರೆ, ನಾಯಕ ರೋಹಿತ್ ಶರ್ಮ 11 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 23 ರನ್ ಗಳಿಸಿ ಉತ್ತಮ ಕೊಡುಗೆ ನೀಡಿದರು. ಎಲ್ಲಾ ಬ್ಯಾಟರ್ಗಳು ಉತ್ತಮ ಕೊಡುಗೆ ನೀಡುವ ಮೂಲಕ ಉತ್ತಮ ಮೊತ್ತ ಪೇರಿಸಲು ನೆರವಾದರು. ಬಾಂಗ್ಲಾ ಪರ ತಂಜೀಮ್, ರಶೀದ್ ತಲಾ 2 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.