ಪರ್ತ್: ಆತಿಥೇಯ ಆಸ್ಟ್ರೇಲಿಯಾ ವೇಗಿಗಳ ಅಮೋಘ ದಾಳಿ ಎದುರು ಮೊದಲ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ತಂಡ, ಬೌಲಿಂಗ್ನಲ್ಲಿ ತಿರುಗೇಟು ನೀಡಿದೆ. ನಾಯಕ ಜಸ್ಪ್ರಿತ್ ಬೂಮ್ರಾ ನೇತೃತ್ವದಲ್ಲಿ ಶಿಸ್ತಿನ ದಾಳಿ ಸಂಘಟಿಸಿದ ವೇಗಿಗಳು, ಕಾಂಗರೂ ಪಡೆಯ ಬ್ಯಾಟರ್ಗಳನ್ನು ಕಾಡಿದರು.ಭಾರತ ಗಳಿಸಿದ ಅಲ್ಪ ಮೊತ್ತದೆದುರು ಇನಿಂಗ್ಸ್ ಆರಂಭಿಸಿದ ಪ್ಯಾಟ್ ಕಮಿನ್ಸ್ ಪಡೆ, ಮೊದಲ ದಿನದಾಟದ
ಅಂತ್ಯಕ್ಕೆ ಕೇವಲ 67 ರನ್ ಗಳಿಸಿ ಪ್ರಮುಖ 7 ವಿಕೆಟ್ಗಳನ್ನು ಕಳೆದುಕೊಂಡಿದೆ.ಆಸಿಸ್ ಬ್ಯಾಟರ್ಗಳೆದುರು ಬಿರುಗಾಳಿಯಂತೆ ಎರಗಿದ ಬೂಮ್ರಾ, ಮೊದಲ ಮೂರೂ ವಿಕೆಟ್ಗಳನ್ನು ಪಡೆಯುವ ಮೂಲಕ ಟೀಂ ಇಂಡಿಯಾ ಪಡೆಗೆ ವಿಶ್ವಾಸ ತುಂಬಿದರು. ಒಟ್ಟು ನಾಲ್ಕು ವಿಕೆಟ್ ಬುಟ್ಟಿಗೆ ಹಾಕಿಕೊಂಡ ಅವರಿಗೆ ಮೊಹಮ್ಮದ್ ಸಿರಾಜ್ (2 ವಿಕೆಟ್) ಮತ್ತು ಹರ್ಷಿತ್ ರಾಣಾ (1 ವಿಕೆಟ್) ಉತ್ತಮ ಸಹಕಾರ ನೀಡಿದರು.
ಇನಿಂಗ್ಸ್ ಹಿನ್ನಡೆ ತಪ್ಪಿಸಿಕೊಳ್ಳಲು ಆಸ್ಟ್ರೇಲಿಯಾ, ಉಳಿದಿರುವ ಮೂರು ವಿಕೆಟ್ಗಳಿಂದ ಇನ್ನೂ 83 ರನ್ ಗಳಿಸಬೇಕಿದೆ. ಅಲೆಕ್ಸ್ ಕಾರಿ (19 ರನ್) ಹಾಗೂ ನಾಯಕ ಪ್ಯಾಟ್ ಕಮಿನ್ಸ್ (6 ರನ್) ಕ್ರೀಸ್ನಲ್ಲಿದ್ದಾರೆ.
ಟಾಸ್ ಗೆದ್ದ ಬೂಮ್ರಾ ಬ್ಯಾಟಿಂಗ್ ಆಯ್ದುಕೊಂಡರು. ಆದರೆ, ಅವರ ಲೆಕ್ಕಾಚಾರ ತಲೆಕೆಳಗಾಯಿತು. ಟೀಂ ಇಂಡಿಯಾ 49.4 ಓವರ್ಗಳಲ್ಲಿ ಕೇವಲ 150 ರನ್ಗಳಿಸಿ ಸರ್ವಪತನ ಕಂಡಿತು.
ಕನ್ನಡಿಗ ಕೆ.ಎಲ್.ರಾಹುಲ್ ಜೊತೆ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಹಾಗೂ 3ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ದೇವದತ್ತ ಪಡಿಕ್ಕಲ್ ಸೊನ್ನೆ ಸುತ್ತಿದರು. ನಂತರ ಬಂದ ಅನುಭವಿ ವಿರಾಟ್ ಕೊಹ್ಲಿ ಆಟ 5 ರನ್ಗೆ ಅಂತ್ಯವಾಯಿತು. ರಕ್ಷಣಾತ್ಮಕವಾಗಿ ಆಡುತ್ತಿದ್ದ ರಾಹುಲ್ (26 ರನ್), ಯುವ ಬ್ಯಾಟರ್ ಧ್ರುವ್ ಜುರೇಲ್ (11 ರನ್), ವಾಷಿಂಗ್ಟನ್ ಸುಂದರ್ (4 ರನ್) ಸಹ ಕೊಹ್ಲಿ ಹಿಂದೆಯೇ ಹೊರಟರು.
ಹೀಗಾಗಿ, ತಂಡದ ಮೊತ್ತ 73 ರನ್ಗಳಿಗೆ 6 ವಿಕೆಟ್ ಆಗಿತ್ತು. ಈ ವೇಳೆ ಜೊತೆಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹಾಗೂ ನಿತೀಶ್ ರೆಡ್ಡಿ 7ನೇ ವಿಕೆಟ್ಗೆ 48 ರನ್ ಕೂಡಿಸಿದರು.
ಪಂತ್ 37 ರನ್ ಗಳಿಸಿದರೆ, ಪದಾರ್ಪಣೆ ಪಂದ್ಯವಾಡಿದ ರೆಡ್ಡಿ 42 ರನ್ ಬಾರಿಸಿದರು. ಇವರಿಬ್ಬರ ಆಟದ ಬಲದಿಂದಾಗಿ, ಟೀಂ ಇಂಡಿಯಾ 150 ರನ್ ಗಳಿಸಲು ಸಾಧ್ಯವಾಯಿತು.
ಆಸಿಸ್ ಪರ ಮಿಂಚಿದ ವೇಗಿ ಜೋಶ್ ಹ್ಯಾಷಲ್ವುಡ್ 4 ವಿಕೆಟ್ ಪಡೆದರು. ಮಿಚೇಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ಮಿಚೇಲ್ ಮಾರ್ಷ್ ತಲಾ ಎರಡು ವಿಕೆಟ್ ಹಂಚಿಕೊಂಡರು.
ಮೊದಲ ದಿನದಾಟದಲ್ಲಿ ಪತನಗೊಂಡ 17 ವಿಕೆಟ್ಗಳನ್ನೂ ವೇಗಿಗಳೇ ಪಡೆದರು.