ಸುಳ್ಯ:ಸುಳ್ಯ ನಗರ ಪಂಚಾಯತ್ನ ಕುರುಂಜಿಗುಡ್ಡೆ ಪಾರ್ಕ್ನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಅದಕ್ಕಾಗಿ ವಸತಿ ವ್ಯವಸ್ಥೆ ಕಲ್ಪಿಸಿ ಸಿಬ್ಬಂದಿ ವ್ಯವಸ್ಥೆ ಮಾಡಬೇಕು. ಪಾರ್ಕ್ಗೆ ಪ್ರವೇಶ ಶುಲ್ಕ ವಿಧಿಸುವುದರ ಜೊತೆಗೆ ಅಲ್ಲಿಗೆ ಆಗಮಿಸುವವರ ದಾಖಲಾತಿ ಆಗಬೇಕು ಎಂದು ಪುತ್ತೂರು ಸಹಾಯಕ ಕಮೀಷನರ್ ಜುಬಿನ್ ಮಹಾಪಾತ್ರ ನಗರ ಪಂಚಾಯತ್ ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಗೆ ಖಡಕ್ ಆದೇಶ ನೀಡಿದ್ದಾರೆ. ಸುಳ್ಯ ನಗರ ಪಂಚಾಯತ್ಗೆ ಆಗಮಿಸಿದ ಅವರು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ಈ ಸೂಚನೆ ನೀಡಿದ್ದಾರೆ. ‘ನಿರ್ವಹಣೆಯ ಕೊರತೆಯಿಂದ ಕುರುಂಜಿ ಗುಡ್ಡೆಯ ಪಾರ್ಕ್ ನಾಶವಾಗುತ್ತಿರುವುದರ ಬಗ್ಗೆ
‘ಸುಳ್ಯ ಮಿರರ್’ ಸೇರಿದಂತೆ ವಿವಿಧ ಡಿಜಿಟಲ್ ಮಾಧ್ಯಮಗಳು ವಿಸ್ತೃತ ವರದಿ ಪ್ರಕಟಿಸಿದ್ದವು.ಈ ಕುರಿತು ಸಭೆಯಲ್ಲಿ ಭಾರೀ ಚರ್ಚೆ ನಡೆಯಿತು. ಮಾಧ್ಯಮ ವರದಿಗಳನ್ನು ನಾನು ಓದಿದ್ದೇನೆ. ಈ ಮೂಲಕ ಸಮಸ್ಯೆಯ ಮಾಹಿತಿ ಇದೆ ಎಂದು ಎಸಿಯವರು ಹೇಳಿದರು. ಸುಮಾರು 12 ಲಕ್ಷ ರೂ ಖರ್ಚು ಮಾಡಿ ನಿರ್ಮಿಸಿದ ಪಾರ್ಕ್ ನಾಶವಾಗುತ್ತಿರುವುದರ ಬಗ್ಗೆ ಸದಸ್ಯರು ಕೂಡ ಆತಂಕ ವ್ಯಕ್ತಪಡಿಸಿದರು. ಪಾರ್ಕ್ನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಅದನ್ನು ನೋಡಿಕೊಳ್ಳಲು ವಸತಿ ವ್ಯವಸ್ಥೆ ಮಾಡಿ ಒಬ್ಬರು ಸಿಬ್ಬಂದಿಯನ್ನು ನೇಮಕ ಮಾಡಿ ಪಾರ್ಕ್ ನಿರ್ವಹಣೆ ಮಾಡಬೇಕು. ಪಾರ್ಕ್ಗೆ ಶುಲ್ಕ ವಿಧಿಸಬೇಕು. ಇದರಿಂದ ಪಂಚಾಯತ್ಗೆ
ಪಾರ್ಕ್ ಕುರಿತು ಸುಳ್ಯ ಮಿರರ್ ಪ್ರಕಟಿಸಿದ ವಿಶೇಷ ವರದಿ
ಆದಾಯ ಬರುತ್ತದೆ. ಭೇಟಿ ಕೊಡುವ ಪ್ರತಿಯೊಬ್ಬರ ದಾಖಲಾತಿ ಮಾಡಬೇಕು. ಹೆಸರು, ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಬೇಕು. ಅಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಸೂಚಿಸಿದರು.ಈ ಬಗ್ಗೆ ಚರ್ಚಿಸಿ ನಿರ್ವಹಣೆ ಸಮರ್ಪಕವಾಗಿ ಮಾಡಲು ಕ್ರಮ ಕೈಗೊಳ್ಳಬೇಕು. ಅದಕ್ಕೆ ಬೇಕಾದ ಸಲಹೆ ಸೂಚನೆಗಳನ್ನು ನೀಡಲು ಸಿದ್ಧನಿದ್ದೇನೆ. ಆದರೆ ಮುಂದೆ ಅದರ ನಿರ್ವಹಣೆಯನ್ನು ನಗರ ಪಂಚಾಯತ್ ಮಾಡಬೇಕು ಎಂದು ಆಡಳಿತಾಧಿಕಾರಿ ತಹಶೀಲ್ದಾರ್ ಜಿ.ಮಂಜುನಾಥ್ ಹಾಗೂ ನಗರ ಪಂಚಾಯತ್ ಮುಖ್ಯಾಧಿಕಾರಿಗೆ ಸುಧಾಕರ್ ಅವರಿಗೆ ಸೂಚನೆ ನೀಡಿದರು. ಒಂದು ಪ್ರವಾಸೋದ್ಯಮ ಕೇಂದ್ರವಾಗಿ ಮಾಡಲು ಎಲ್ಲಾ ಅವಕಾಶ ಇದೆ. ಅದಕ್ಜಕಾಗಿ ಪಾರ್ಕನ್ನು ಚೆನ್ನಾಗಿ ನಿರ್ವಹಿಸುವ ಅವಕಾಶ ಇದೆ ಎಂದು ಹೇಳಿದರು. ಮುಂದಿನ ವಾರ ಪಾರ್ಕ್ಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಬಳಿಕ ಎಸಿಯವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಒಳಾಂಗಣ ಕ್ರೀಡಾಂಗಣದಿಂದ ಆದಾಯ ಬರಬೇಕು:
50ಲಕ್ಷಕ್ಕೂ ಅಧಿಕ ರೂ ಖರ್ಚು ಮಾಡಿ ನಿರ್ಮಿಸಿದ ಕುರುಂಜಿ ಗುಡ್ಡೆಯ ಒಳಾಂಗಣ ಕ್ರೀಡಾಂಗಣದಿಂದ ಆದಾಯ ಯಾಕೆ ಬರುತ್ತಿಲ್ಲ ಎಂದು ಸಹಾಯಕ ಕಮೀಷನರ್ ಪ್ರಶ್ನಿಸಿದರು. ಅಲ್ಲಿ ಬ್ಯಾಡ್ಮಿಂಟನ್ ಆಡಲು ಉಚಿತವಾಗಿ ಕೊಡುವುದು ಯಾಕೆ, ಬಾಡಿಗೆ ಯಾಕೆ ಸಂಗ್ರಹ ಮಾಡುತ್ತಿಲ್ಲಾ ಎಂದು ಎಸಿಯವರು ಪ್ರಶ್ನಿಸಿದರು. ಈ ಹಿಂದೆ ಬಾಡಿಗೆ ಸಂಗ್ರಹ ಮಾಡಲು ನಿರ್ಧಾರ ಕೈಗೊಂಡಿದ್ದರೂ ಅದನ್ನು ಸಂಗ್ರಹಿಸುತ್ತಿಲ್ಲ ಎಂದು ಸದಸ್ಯರು ಹೇಳಿದರು. ನಗರ ಪಂಚಾಯತ್ಗೆ ಆದಾಯ ಬರುವಂತೆ ನೋಡಿಕೊಳ್ಳಬೇಕು. ಸೂಕ್ತವಾದ ಬಾಡಿಗೆ, ಶುಲ್ಕ ಸಂಗ್ರಹಿಸಬೇಕು ಎಂದು ಹೇಳಿದರು.ಪಾರ್ಕ್ ನಿರ್ವಹಣೆಗೆ ನೇಮಕ ಮಾಡುವ ಸಿಬ್ಬಂದಿ ಒಳಾಂಗಣ ಕ್ರೀಡಾಂಗಣದ ಮೇಲುಸ್ತುವಾರಿ ನೋಡಿಕೊಳ್ಳಬೇಕು ಎಂದು ಸಹಾಯಕ ಕಮೀಷನರ್ ನಗರ ಪಂಚಾಯತ್ ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಗೆ ಸೂಚಿಸಿದರು.