ಸುಳ್ಯ:ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಸುಳ್ಯ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಸ್ಪತ್ರೆಯ ಡಯಾಲಿಸಿಸ್ ವಿಭಾಗ, ಐಸಿಯು, ಹೊರ ರೋಗಿ ವಿಭಾಗ, ವಾರ್ಡ್ಗೆ ಭೇಟಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿ ಆಸ್ಪತ್ರೆಯ ಕಾರ್ಯ ಚಟುವಟಿಕೆಗಳ ಬಗ್ಗೆ
ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ಎಕ್ಸ್ರೇ ಮತ್ತಿತರ ವಿಭಾಗಗಳಲ್ಲಿ ಟೆಕ್ನಿಷಿಯನ್ಗಳ ಹುದ್ದೆ ಖಾಲಿ ಇರುವ ಬಗ್ಗೆ ಸಚಿವರಿಗೆ ತಿಳಿಸಲಾಯಿತು. ಟೆಕ್ನಿಷಿಯನ್ಗಳ ನೇಮಕಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರ ಕೊರತೆ ಇರುವ ಬಗ್ಗೆ ಸಚಿವರ ಗಮನಕ್ಕೆ ತರಲಾಯಿತು. ಆಗಸ್ಟ್ ತಿಂಗಳ ಬಳಿಕ ತಜ್ಞ ವೈದ್ಯರ ನೇಮಕಕ್ಕೆ
ಸರಕಾರ ಕ್ರಮ ಕೈಗೊಳ್ಳಲಾಗುತಿದೆ. ರಾಜ್ಯದ ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆಯನ್ನು ತುಂಬಲಾಗುವುದು. ಆ ಸಂದರ್ಭದಲ್ಲಿ ಸುಳ್ಯದ ಆಸ್ಪತ್ರೆಯಲ್ಲಿಯೂ ವೈದ್ಯರ ನೇಮಕ ಮಾಡಲಾಗುವುದು. ತಜ್ಞ ವೈದ್ಯರ ನೇಮಕ ಆಗುವ ತನಕ ಲಭ್ಯ ಇರುವ ವೈದ್ಯರ ಸೇವೆಯನ್ನೇ ಮುಂದುವರಿಸುವ ಪ್ರಯತ್ನ ನಡೆಸಿ ಎಂದು ಅವರು ಹೇಳಿದರು. ಜಿಲ್ಲಾ ಆರೋಗ್ಯಾಧಿಕಾರಿ ತಿಮ್ಮಯ್ಯ, ಸುಳ್ಯ ತಾಲೂಕು
ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ ಆಸ್ಪತ್ರೆಯ ಕಾರ್ಯ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ, ಮುಖಂಡರಾದ ನಿತ್ಯಾನಂದ ಮುಂಡೋಡಿ, ಶಾಫಿ ಕುತ್ತಮೊಟ್ಟೆ ಮತ್ತಿತರರು ಉಪಸ್ಥಿತರಿದ್ದರು.