ಗುರುವಾಯೂರು: ಕೇರಳಂನ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಾಲಯದಲ್ಲಿ ಭಾನುವಾರ(ಆಗಸ್ಟ್ 23) 416 ಮದುವೆಗಳು ನಡೆದಿವೆ. ದೇವಾಲಯದಲ್ಲಿ ಈವರೆಗೆ ಒಂದೇ ದಿನದಲ್ಲಿ ನಡೆದ ಅತ್ಯಧಿಕ ಮದುವೆಗಳ ಸಂಖ್ಯೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಲಯಾಳ ಹೊಸ ವರ್ಷ ಚಿಂಗಮ್ ಮಾಸದ ಮೊದಲ
ಭಾನುವಾರವನ್ನು ಮದುವೆಗೆ ಶುಭವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಅಂದು ಹೆಚ್ಚಿನ ಸಂಖ್ಯೆಯಲ್ಲಿ ವಿವಾಹಗಳು ನಡೆಯುತ್ತವೆ.2024ರ ಸೆಪ್ಟೆಂಬರ್ 8ರಂದು 334 ಮದುವೆಗಳು ನಡೆದಿದ್ದು ಈವರೆಗಿನ ದಾಖಲೆಯಾಗಿತ್ತು ಎಂದು ಗುರುವಾಯೂರು ದೇವಾಲಯದ ಆಡಳಿತ ಮಂಡಳಿತಿಳಿಸಿದೆ.
ದೇವಾಲಯದ ಪೂರ್ವ ದ್ವಾರದ ಮೊದಲ ಮಂಟಪದಲ್ಲಿ ದೇವಸ್ವಂ ಮಂಡಳಿಯ ಅಧ್ಯಕ್ಷ ಎ.ವಿ. ಗೋಪಿನಾಥ್ ದೀಪ ಬೆಳಗುವ ಮೂಲಕ ಮದುವೆ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಿತು.ಬೆಳಗಿನ ಜಾವ 4.10ಕ್ಕೆ ಆರಂಭವಾದ ಮದುವೆ ಕಾರ್ಯಕ್ರಮಗಳು ಮಧ್ಯಾಹ್ನ 12.45ರವರೆಗೆ ಮುಂದುವರಿದಿದ್ದವು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ದೇಗುಲದ ಆವರಣದಲ್ಲಿ ಮದುವೆಗಾಗಿ 6 ಮಂಟಪಗಳನ್ನು ನಿರ್ಮಾಣ ಮಾಡಲಾಗಿತ್ತು. ಪ್ರತಿ ಮದುವೆ ಕಾರ್ಯಕ್ರಮಕ್ಕೆ ಟೋಕನ್ ನೀಡಲಾಗಿತ್ತು. ಜನಸಂದಣಿ ತಪ್ಪಿಸಲು ವಧು ಮತ್ತು ವರರ ಕಡೆಯಿಂದ 24 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. 6 ಮಂಟಪಗಳಲ್ಲಿ ಪ್ರತಿ ಒಂದು ಗಂಟೆಗೆ 60ಕ್ಕೂ ಹೆಚ್ಚು ಮದುವೆಗಳು ನಡೆದಿವೆ.








