ಬೆಂಗಳೂರು: ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಭಾಗವಾಗಿ ರಾಜ್ಯದ ಕರಡು ಮತದಾರರ ಪಟ್ಟಿಯು ಆಗಸ್ಟ್ 24ರ ಸೋಮವಾರ ಪ್ರಕಟವಾಗಲಿದೆ.ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ, 4.46 ಕೋಟಿ ಮತದಾರರ ಹೆಸರಷ್ಟೇ ಕರಡು ಮತದಾರರ ಪಟ್ಟಿಯಲ್ಲಿ ಇರಲಿದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.ಎಸ್ಐಆರ್ ಭಾಗವಾಗಿ ರಾಜ್ಯದ ಎಲ್ಲ ಮತದಾರರ
ವಿವರ, ಪೌರತ್ವವನ್ನು ಪರಿಶೀಲನೆಗೆ ಒಳಪಡಿಸಲಾಗಿತ್ತು. ಮೊದಲ ಹಂತದಲ್ಲಿ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿತ್ತು. 2026ರ ಮತದಾರರ ವಿವರ ಮತ್ತು 2002ರ ಮತದಾರರ ವಿವರಗಳನ್ನು ಭರ್ತಿ ಮಾಡಿ ಮತದಾರರು ಸಲ್ಲಿಸಬೇಕಿತ್ತು. ಈ ಹಂತದಲ್ಲಿಯೇ 1.08 ಕೋಟಿ ಮತದಾರರ ಕರಡು ಮತದಾರರ ಪಟ್ಟಿಯಿಂದ ಹೊರಗೆ ಉಳಿದಿದ್ದಾರೆ.
ಮತಗಟ್ಟೆ ಅಧಿಕಾರಿಗಳು (ಬಿಎಲ್ಒ) ಮನೆ–ಮನೆಗೆ ಭೇಟಿ ನೀಡಿದಾಗ ಪತ್ತೆಯಾಗಿಲ್ಲ ಎಂದು 15.17 ಲಕ್ಷ, ಸ್ಥಳಾಂತರ ಎಂದು 65.45 ಲಕ್ಷ, ಮೃತ ಎಂದು 16.39 ಲಕ್ಷ, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿ ಎಂದು 7.09 ಲಕ್ಷ ಹಾಗೂ ಗಣತಿ ನಮೂನೆಗೆ ಸಹಿ ಮಾಡಿಲ್ಲ ಎಂದು 3.83 ಲಕ್ಷ ಮತದಾರರನ್ನು ವರ್ಗೀಕರಿಸಲಾಗಿತ್ತು. ಈ ಮತದಾರರ ಗಣತಿ ನಮೂನೆ ಸಲ್ಲಿಕೆಯಾಗದೇ ಇರುವ ಕಾರಣಕ್ಕೆ, ಇವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಇರುವುದಿಲ್ಲ.
ಈ ಮತದಾರರು ಹೊಸದಾಗಿ ನೋಂದಣಿ ಮಾಡಿಸಲು ಅರ್ಜಿ ಸಂಖ್ಯೆ–6 ಅನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕಿದೆ.ಮತಗಟ್ಟೆ ಅಧಿಕಾರಿಗಳ ಪರಿಶೀಲನೆಯ ನಂತರ ಆ ಮತದಾರರ ಪೌರತ್ವ ಧೃಡಪಟ್ಟರಷ್ಟೇ, ಅವರ ಹೆಸರನ್ನು ಅಂತಿಮ ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ. 17 ಲಕ್ಷಕ್ಕೂ ಹೆಚ್ಚು ಮತದಾರರು ಅರ್ಜಿಗಳನ್ನು ಈಗಾಗಲೇ ಸಲ್ಲಿಸಿದ್ದಾರೆ.ಇನ್ನು ಗಣತಿ ನಮೂನೆ ಸಲ್ಲಿಸಿದ 4.46 ಕೋಟಿ ಮತದಾರರ ಪೈಕಿ 43.84 ಲಕ್ಷ ಮತದಾರರಿಗೆ ನೋಟಿಸ್ ಜಾರಿಯಾಗಲಿದೆ. 2002ರ ಮತದಾರರ ಪಟ್ಟಿಯಲ್ಲಿನ ವಿವರ ವ್ಯತ್ಯಾಸವಿದೆ ಎಂದು 20.35 ಲಕ್ಷ, 2002ರ ಮತದಾರರ ವಿವರ ಲಭ್ಯವಿಲ್ಲ ಎಂದು 23.45 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಈ ಎಲ್ಲರೂ ಅಗತ್ಯ ದಾಖಲೆಗಳೊಂದಿಗೆ ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಿದೆ. ಆಗಸ್ಟ್ 31ರ ನಂತರ ನೋಟಿಸ್ ಸೃಜಿಸಿ, ಮತದಾರರಿಗೆ ನೀಡಲಾಗುತ್ತದೆ.
ಕರಡು ಮತದಾರರ ಪಟ್ಟಿಗೆ ಆಕ್ಷೇಪ ಮತ್ತು ಕ್ಲೇಮುಗಳನ್ನು ಸಲ್ಲಿಸಲು ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಅವಕಾಶವಿದೆ.








