ಸಿಂಗಪುರ: ಭಾರತದ ಗ್ರ್ಯಾಂಡ್ಮಾಸ್ಟರ್ ಗುಕೇಶ್ ದೊಮ್ಮರಾಜು ವಿಶ್ವ ಚೆಸ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡರು. ವಿಶ್ವ ಚಾಂಪಿಯನ್ ಆದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಭಾಜನರಾದರು. 18 ವರ್ಷ ವಯಸ್ಸಿನ ಗುಕೇಶ್, ಗುರುವಾರ ನಡೆದ ಚಾಂಪಿಯನ್ಷಿಪ್ ಫೈನಲ್ನ 14ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ
ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ಚಾಂಪಿಯನ್ ಆದರು. ಅಂತಿಮ ಪಂದ್ಯದವರೆಗೆ ಬೆಳೆದ ಫೈನಲ್ ಅನ್ನು ಗುಕೇಶ್ 7.5–6.5 ಅಂಕಗಳ ಅಂತರದಲ್ಲಿ ಗೆದ್ದು ಸಂಭ್ರಮಿಸಿದರು. 32 ವರ್ಷ ವಯಸ್ಸಿನ ಲಿರೆನ್ ಕೊನೆಯವರೆಗೂ ಹೋರಾಟ ನೀಡಿದರು. 21 ಕೋಟಿ ಬಹುಮಾನ ಮೊತ್ತದಲ್ಲಿ ಬಹುಪಾಲನ್ನು ಗುಕೇಶ್ ಪಡೆಯಲಿದ್ದಾರೆ. ಈ ಹಿಂದಿನ ಚಾಂಪಿಯನ್ ಆಗಿದ್ದ ಲಿರೆನ್ 59ನೇ ನಡೆಯಲ್ಲಿ ಸೋಲೊಪ್ಪಿಕೊಂಡರು. ಗುಕೇಶ್ ಎರಡೂ ಕೈಗಳಿಂದ ಮುಖವನ್ನು ಮುಚ್ಚಿಕೊಂಡು ಸಾವರಿಸಿಕೊಳ್ಳಲು ಕೆಲಕ್ಷಣಗಳನ್ನು ತೆಗೆದುಕೊಂಡರು. ‘ನಾನು ಗೆಲುವನ್ನು ನಿರೀಕ್ಷಿಸಿರಲಿಲ್ಲ. ಆದರೆ ಕೊನೆಯಲ್ಲಿ ಅಚಾನಕ್ ಆಗಿ ಆ ಅವಕಾಶ ದೊರೆತು ಜಯ ಸಾಧ್ಯವಾಗಿದ್ದರಿಂದ ಒಂದು ಕ್ಷಣ ಭಾವೋದ್ವೇಗಕ್ಕೆ ಒಳಗಾಗಿದ್ದೆ’ ಎಂದು ನಂತರ ಪ್ರತಿಕ್ರಿಯಿಸಿದರು.
ತಮ್ಮ ಆಸನದಿಂದ ಎದ್ದ ಗುಕೇಶ್ ಎರಡೂ ಕೈಗಳನ್ನು ಮೇಲೆತ್ತಿ ಗೆಲುವನ್ನು ಸಂಭ್ರಮಿಸಿದರು.
ಚೆಸ್ ಲೋಕದ ದಿಗ್ಗಜರಲ್ಲಿ ಒಬ್ಬರಾದ ರಷ್ಯಾದ ಗ್ಯಾರಿ ಕ್ಯಾಸ್ಪರೋವ್ ಅವರು 1985ರ ಫೈನಲ್ನಲ್ಲಿ ಸ್ವದೇಶದ ಅನತೋಲಿ ಕಾರ್ಪೋವ್ ಅವರನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದಾಗ ಅವರ ವಯಸ್ಸು 22 ವರ್ಷ. 39 ವರ್ಷಗಳ ಬಳಿಕ ಗುಕೇಶ್ ಆ ದಾಖಲೆಯನ್ನು ಮುರಿದರು.
ಈ ವರ್ಷದ ಏಪ್ರಿಲ್ನಲ್ಲಿ ಟೊರಾಂಟೊದಲ್ಲಿ (ಕೆನಡಾ) ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದಾಗ ಚೆನ್ನೈನ ಈ ಆಟಗಾರ ವಿಶ್ವ ಚಾಂಪಿಯನ್ ಪಟ್ಟಕ್ಕೆ ಅತಿ ಕಿರಿಯ ಚಾಲೆಂಜರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು.
ವಿಶ್ವ ಚಾಂಪಿಯನ್ ಕಿರೀಟ ಧರಿಸಿದ ಭಾರತದ ಎರಡನೇ ಆಟಗಾರ ಎಂಬ ಶ್ರೇಯವೂ ಅವರದಾಯಿತು. ಭಾರತದಲ್ಲಿ ಚೆಸ್ ಕ್ರಾಂತಿಗೆ ಮುನ್ನುಡಿ ಬರೆದಿದ್ದ ವಿಶ್ವನಾಥನ್ ಆನಂದ್ 2000 ದಿಂದ 2013ರ ಅವಧಿಯಲ್ಲಿ ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು.
ಗುಕೇಶ್ ಕಪ್ಪು ಕಾಯಿಗಳಲ್ಲಿ ಆಡಿದ್ದು, ಹದಿನಾಲ್ಕನೇ ಪಂದ್ಯವೂ ಬಹುತೇಕ ಡ್ರಾ ಹಾದಿ ಹಿಡಿದಿತ್ತು. ಆದರೆ 55ನೇ ನಡೆಯಲ್ಲಿ ಗುಕೇಶ್ಗೆ ಅವಕಾಶದ ಬಾಗಿಲನ್ನು ದೊರೆಯಿತು.ಒಟ್ಟು 14 ಪಂದ್ಯಗಳಲ್ಲಿ ಗುಕೇಶ್ ಮೂರು ಪಂದ್ಯಗಳನ್ನು (3, 11, 14ನೇ) ಗೆದ್ದರೆ, ಲಿರೆನ್ ಎರಡು ಪಂದ್ಯಗಳನ್ನು (1, 12) ಗೆದ್ದಿದ್ದರು. ಉಳಿದ 9 ಪಂದ್ಯಗಳು ‘ಡ್ರಾ’ ಆಗಿದ್ದವು.