ಸುಳ್ಯ: ಸಮಾಜದಲ್ಲಿ ಉತ್ತಮ ಕೆಲಸ ಮಾಡಿದವರನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ಅದರಂತೆ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡು ಅತ್ಯುತ್ತಮ ಕೆಲಸ ಮಾಡಿರುವ ಗೋಕುಲ್ದಾಸ್ ಅವರನ್ನು ಸನ್ಮಾನಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗಿದೆ ಎಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕರಾದ ಸಹಕಾರ ರತ್ನ ಸೀತಾರಾಮ ರೈ ಸವಣೂರು ಹೇಳಿದ್ದಾರೆ. ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಗೋಕುಲ್ದಾಸ್ ಅಭಿನಂದನಾ ಸಮಿತಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಡಿ.28 ರಂದು
ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆದ ಈ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಕೆ.ಗೋಕುಲ್ದಾಸ್ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಜೊತೆಯಲ್ಲಿಯೇ ಕಾರ್ಯನಿರ್ವಹಿಸಿ ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ದುಡಿದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವುದು, ಸಾರ್ವಜನಿಕವಾಗಿ ಅಭಿನಂದಿಸಲ್ಪಡುತ್ತಿರುವುದು ನಮಗೆ ಹೆಮ್ಮೆ ಎಂದು ಅವರು ಹೇಳಿದರು.

ಯುವಜನ ಸಂಯುಕ್ತ ಮಂಡಳಿಯ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಅಭಿನಂದನಾ ಭಾಷಣ ಮಾಡಿ ‘ಎಲ್ಲಾ ಕ್ಷೇತ್ರಗಳಲ್ಲಿ ಪೂರ್ತಿಯಾಗಿ ತೊಡಗಿಸಿಕೊಂಡು ಅದನ್ನು ಯಶಸ್ವಿಗೊಳಿಸುವುದು ಗೋಕುಲ್ದಾಸ್ ಅವರ ಹೆಗ್ಗಳಿಕೆ. ಮಾನವೀಯತೆ ರಕ್ತಗತವಾಗಿ ಬಂದಿದೆ. ಅವರು ಅರ್ಧಶತಮಾನಗಳ ಕಾಲ ಸಮಾಜ ಸೇವೆಗಾಗಿ ತಮ್ಮ ಬದುಕನ್ನು ಸವೆಸಿದ್ದಾರೆ ಎಂದು ಹೇಳಿದರು.ಕೆ.ಗೋಕುಲ್ದಾಸ್ ಸಾರ್ವಜನಿಕ ಅಭಿನಂದನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನಕ್ಕೆ ಉತ್ತರಿಸಿದ ಕೆ.ಗೋಕುಲ್ದಾಸ್ ಮಾತನಾಡಿ ಜನರ ಪ್ರೀತಿ, ವಿಶ್ವಾಸಕ್ಕೆ ಮತ್ತು ಗೌರವಕ್ಕೆ ಚಿರ ಋಣಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಎಸ್.ಅಂಗಾರ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಭಾಗವಹಿಸಿದ್ದರು. ಗೌರವ ಅತಿಥಿಗಳಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಅಭಿನಂದನಾ ಸಮಿತಿಯ ಗೌರವ ಸಲಹೆಗಾರರಾದ ಡಾ.ಲೀಲಾಧರ ಡಿ.ವಿ, ವಾಲಿಬಾಲ್ ಎಸೋಸಿಯೇಶನ್ನ ಅಸೋಸಿಯೇಟ್ ಸೆಕ್ರೆಟರಿ ಹಾಗೂ ಸಮಿತಿಯ ಗೌರವ ಸಲಹೆಗಾರರಾದ ಎನ್.ಜಯಪ್ರಕಾಶ್ ರೈ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಲಯನ್ಸ್ ಕ್ಲಬ್ನ ಮಾಜಿ ಗವರ್ನರ್ ಎಂ.ಬಿ.ಸದಾಶಿವ,ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್ ಭಾಗವಹಿಸಿದ್ದರು.

ಅಭಿನಂದನಾ ಸಮಿತಿಯ ಉಪಾಧ್ಯಕ್ಷರಾದ ನಾರಾಯಣ ಕೇಕಡ್ಕ, ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಕೋಶಾಧಿಕಾರಿ ಬೂಡು ರಾಧಾಕೃಷ್ಣ ರೈ, ಶಾಫಿ ಕುತ್ತಮೊಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಭಿನಂದನಾ ಸಮಿತಿಯ ಉಪಾಧ್ಯಕ್ಷರಾದ ನಾರಾಯಣ ಕೇಕಡ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಹಾಗೂ ಸಾರ್ವಜನಿಕರ ವತಿಯಿಂದ ಗೋಕುಲ್ದಾಸ್ ಅವರಿಗೆ ಹಾರಾರ್ಪಣೆ ಮಾಡಿ, ಹೂಗುಚ್ಛ ನೀಡಿ ಗೌರವಿಸಲಾಯಿತು.

