ತಲಕಾವೇರಿ:ಜೀವ ನದಿ ಕಾವೇರಿಯ ಉಗಮ ಸ್ಥಾನ ಪುಣ್ಯ ಕ್ಷೇತ್ರ ತಲಕಾವೇರಿಯಲ್ಲಿ ಶನಿವಾರ ರಾತ್ರಿ 7ಗಂಟೆ 50 ನಿಮಿಷಕ್ಕೆ ಸಲ್ಲಿದ ‘ಮೇಷ’ ಲಗ್ನದಲ್ಲಿ ಪವಿತ್ರ ಬ್ರಹ್ಮ ಕುಂಡಿಕೆಯಿಂದ ಕಾವೇರಿ ಮಾತೆ ತೀರ್ಥ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದಳು. ಭಕ್ತರ ಜಯಘೋಷ, ವೈದಿಕ ತಂಡದವರಿಂದ ವೇದ ಮಂತ್ರಗಳ ಪಠಣ, ವಿವಿಧ
ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪವಿತ್ರ ಕುಂಡಿಕೆಯಲ್ಲಿ ಮಾತೆ ಕಾವೇರಿಯ ‘ತೀರ್ಥ ಸ್ವರೂಪಿಣಿ’ ದರ್ಶನ ಪಡೆದು ಭಕ್ತ ಸಮೂಹ ಪಾವನರಾದರು. ಈ ಸಂದರ್ಭ ಜೈ ಜೈ ಮಾತಾ ಕಾವೇರಿ ಮಾತಾ, ಕಾವೇರಮ್ಮನ ಪಾದಾರವಿಂದಕ್ಕೆ ಗೋವಿಂದಾ, ಕಾವೇರಿ ಮಾತೆ ಉಕ್ಕಿ ಬಾ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು.ತಲಕಾವೇರಿಯ ತೀರ್ಥ ಕುಂಡಿಕೆಯಲ್ಲಿ ಅರ್ಚಕರ ತಂಡ ವಿವಿಧ ಪೂಜಾ ವಿಧಿಗಳನ್ನು ನೆರವೇರಿಸಿದರು. ತೀರ್ಥೋಧ್ಭವ ನಡೆದ ಬಳಿಕ ತೀರ್ಥ ಕುಂಡಿಕೆಯಿಂದ

ತೀರ್ಥ ಹೊರ ತೆಗೆದು ಅರ್ಚಕ ವೃಂದ ಸುತ್ತಲೂ ನೆರೆದಿದ್ದ ಭಕ್ತರ ಮೇಲೂ ತೀರ್ಥ ಪ್ರೋಕ್ಷಣೆ ಮಾಡಿದರು.ಭಕ್ತ ಸಮೂಹ ಪವಿತ್ರ ಕೊಳಕ್ಕೆ ಧುಮುಕಿ
ತೀರ್ಥ ಸ್ನಾನ ಮಾಡಿ ಭಕ್ತರು ಪುನೀತರಾದರು.ತಾವುಗಳು ತಂದಿದ್ದ ಸ್ಟೀಲ್ ಬಿಂದಿಗೆಗಳಲ್ಲಿ ತೀರ್ಥ ತುಂಬಿಕೊಂಡು ಪ್ರಸನ್ನರಾದರು. ಇದೇ ಸಂದರ್ಭ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ಕಡೆಗಳಿಂದ ಸಹಸ್ರಾರು ಭಕ್ತರು ಪವಿತ್ರ ಕ್ಷೇತ್ರಕ್ಕೆ ಆಗಮಿಸಿದ್ದರು.ಜಾತ್ರೆ ಹಿನ್ನೆಲೆಯಲ್ಲಿ ಭಕ್ತರು ಬೆಳಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಪುಣ್ಯ ಕ್ಷೇತ್ರಕ್ಕೆ ಆಗಮಿಸಿ ಪೂಜಾ ವಿಧಿ ವಿಧಾನ ಕೈಗೊಂಡಿದ್ದು ಕಂಡು ಬಂತು. ಭಾಗಮಂಡಲದಿಂದ ತಲಕಾವೇರಿಗೆ ಕೆಎಸ್ಆರ್ಟಿಸಿ ಬಸ್ ಸೇವೆ ಒದಗಿಸಲಾಗಿತ್ತು. ತಲಕಾವೇರಿಯಲ್ಲಿ ಕೊಡಗು ಏಕೀಕರಣ ರಂಗದ ವತಿಯಿಂದ

ಎಲ್ಲಾ ಭಕ್ತರಿಗೂ ಅನ್ನದಾನ ವ್ಯವಸ್ಥೆ ಕಲ್ಪಿಸಲಾಗಿತ್ತು. ತೀರ್ಥೋದ್ಭವವನ್ನು ಭಕ್ತರು ವೀಕ್ಷಿಸಲು ಅನುಕೂಲವಾಗುವಂತೆ ಬೃಹತ್ ಎಲ್ಇಡಿ ಪರದೆಗಳನ್ನು ಅಳವಡಿಸಿ ಅದರ ನೇರ ಪ್ರಸಾರ ಮಾಡಲಾಗಿತ್ತು. ನಿರೀಕ್ಷೆಗೂ ಮೀರಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಸೇರಿದಂತೆ ಗಣ್ಯರು ತೀರ್ಥೋದ್ಭವದ ಪವಿತ್ರ ಕ್ಷಣಕ್ಕೆ ಸಾಕ್ಷಿಯಾದರು.










