ಸುಳ್ಯ: ಬಿಜೆಪಿ ನಾಯಕ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ
ಹರೀಶ್ ಕಂಜಿಪಿಲಿ ಅಭಿಮಾನಿ ಬಳಗದ ವತಿಯಿಂದ ಹರೀಶ್ ಕಂಜಿಪಿಲಿ ಅವರ 50ನೇ ಹುಟ್ಟು ಹಬ್ಬ ಆಚರಣೆಯನ್ನು ಎಂ.ಬಿ.ಫೌಂಡೇಶನ್ ಸಹಕಾರದಲ್ಲಿ ಸಾಂದೀಪ್ ವಿಶೇಷ ಶಾಲೆಯಲ್ಲಿ ನ.4ರಂದು ನಡೆಯಿತು. ದೀಪ ಬೆಳಗಿ ಕೇಕ್ ಕತ್ತರಿಸಿ ಸಾಂದೀಪ್ ಶಾಲೆಯ ಮಕ್ಕಳ ಜೊತೆಯಲ್ಲಿ ಹುಟ್ಟು ಹಬ್ಬ ಆಚರಿಸಲಾಯಿತು.ಹರೀಶ್ ಕಂಜಿಪಿಲಿ ಅವರಿಗೆ ಶುಭ ಹಾರೈಸಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ
ಎಲ್ಲರನ್ನೂ ಬೆಳೆಸುವ,ಗಟ್ಟಿ ನಿರ್ಧಾರ ಮಾಡುವ ನಾಯಕ ಹರೀಶ್ ಕಂಜಿಪಿಲಿ, ಅವರು ಪಕ್ಷದ
ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ನನಗೆ ವಿಧಾನಸಭಾ ಚುನಾಚಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಿದರು. ಅವರ ಪರಿಶ್ರಮದಿಂದ ನಾನು ಶಾಸಕಿಯಾಗಿ ಆಯ್ಕೆಯಾಗಲು ಕಾರಣವಾಯಿತು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಂ.ಬಿ.ಫೌಂಡೇಷನ್ನ ಅಧ್ಯಕ್ಷ ಎಂ.ಬಿ.ಸದಾಶಿವ ಮಾತನಾಡಿ ‘ಹರೀಶ್ ಕಂಜಿಪಿಲಿ ಒಬ್ಬ ಪಕ್ಷದ ನಾಯಕ ಮಾತ್ರ ಅಲ್ಲ, ಅವರು ಸಮಾಜದ ನಾಯಕ ಎಂದು ಹೇಳಿದರು. ನಾಯಕನೋರ್ವನ ಉತ್ತಮವಾಗಿ ಸ್ಪಂದಿಸುವ ಮತ್ತು ಅನುಯಾಯಿಗಳನ್ನು ಬೆಳೆಸುವ ಗುಣದಿಂದ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ. ಕಂಜಿಪಿಲಿ
ಮುಂದೆ ವಿಧಾನ ಸಭೆಯಲ್ಲಿಯೋ, ವಿಧಾನ ಪರಿಷತ್ತಿನಲ್ಲೂ ಸುಳ್ಯವನ್ನು ಪ್ರತಿನಿಧಿಸುವಂತಾಗಬೇಕು. ರಾಜಕೀಯದ ಜೊತೆಗೆ ಸಮಾಜ ಸೇವೆಯನ್ನೂ ಮಾಡಿ ಎಂದು ಕರೆ ನೀಡಿದ ಅವರು ಒಳ್ಳೆಯ ನಾಯಕರನ್ನು
ಬೆಳೆಸಬೇಕು ಅವರಿಗೆ ಶಕ್ತಿ ತುಂಬಬೇಕು ಎಂದರು.
ಜಿ.ಪಂ.ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಮಾತನಾಡಿ ಹರೀಶ್ ಕಂಜಿಪಿಲಿ ಸಂಘಟನೆಯನ್ನು, ಪಕ್ಷವನ್ನು ಉತ್ತಮವಾಗಿ ಬೆಳೆಸಿ, ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಜನ ನಾಯಕನಾಗಿ ಬೆಳೆದಿದ್ದಾರೆ ಎಂದರು.
ಬಿಜೆಪಿ ಮಂಡಲ ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ ಮಾತನಾಡಿ ಹರೀಶ್ ಕಂಜಿಪಿಲಿ ಯಾವುದೇ ಕೀರ್ತಿ ಬಯಸದೆ ಕೆಲಸ ಮಾಡುವವರು. ಸಂಘಟನೆಗೆ ಶಕ್ತಿ ತುಂಬಿದವರು. ಅವರಿಗೆ ಉನ್ನತ ಸ್ಥಾನ ದೊರೆಯುವಂತಾಗಬೇಕು ಎಂದು ಹೇಳಿದರು.
ಅರಂತೋಡು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮಾತನಾಡಿ ಹರೀಶ್ ಕಂಜಿಪಿಲಿ ಹಲವಾರು ಯುವಕರನ್ನು ಬೆಳೆಸಿದವರು. ಇಷ್ಟೊಂದು ಯುವ ಸಮೂಹದ ಬೆಂಬಲ ಇರುವ ಬೇರೊಬ್ಬ ನಾಯಕನಿಲ್ಲ. ಈಗ ರಾಜಕೀಯದಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುವವರು ತೆರೆ ಮರೆಗೆ ಹೋಗುವ ಸಂದರ್ಭ ಇದೆ. ನಿಸ್ವಾರ್ಥವಾಗಿ ಕೆಲಸ ಮಾಡುವವರು ಹರೀಶ್ ಕಂಜಿಪಿಲಿ. ವ್ಯಕ್ತಿಗಳಿಗೆ ಸಮಾಜ ಸೇವೆಯಲ್ಲಿ ಭ್ರಮ ನಿರಸನ ಉಂಟಾದರೆ ಅದು ಸಮಾಜಕ್ಕೆ ದೊಡ್ಡ ನಷ್ಟ. ಆದುದರಿಂದ ನಿಸ್ವಾರ್ಥವಾಗಿ ಕೆಲಸ ಮಾಡುವ ನಾಯಕರಿಗೆ ಬೆಂಬಲ ನೀಡಬೇಕು ಎಂದರು.
ಹರೀಶ್ ಕಂಜಿಪಿಲಿ ಮಾತನಾಡಿ ಸಂಘಟನೆಯ ಹಿರಿಯರು ಹಾಕಿ ಕೊಟ್ಟ ದಾರಿಯಲ್ಲಿಯೇ ಕೆಲಸ ಮಾಡಿದ್ದೇನೆ. ನಾನು ದೊಡ್ಡ
ಲೀಡರ್ ಎಂಬ ಭಾವನೆ ಯಾವತ್ತೂ ಇಲ್ಲಾ,
ಕಾರ್ಯಕರ್ತರಿಗೆ, ಜನರಿಗೆ ತೊಂದರೆ ಆದಾಗ ಅವರ ಜೊತೆ ಇರುತ್ತೇನೆ.ಜನರ ಪ್ರೀತಿಯೇ ಗೌರವ ಎಂದರು.
ಸಾಂದೀಪ್ ವಿಶೇಷ ಶಾಲೆಗೆ ಸರಕಾರದಿಂದ ವಿಶೇಷ ಅನುದಾನ ದೊರಕಿಸಲು ಶಾಸಕರು ವಿಶೇಷ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹರೀಶ್ ಕಂಜಿಪಿಲಿ ಅಭಿಮಾನಿ ಬಳಗದ ಸುನಿಲ್ ಕೇರ್ಪಳ ‘ಯುವಕರ ನಾಯಕ ಹರೀಶ್ ಕಂಜಿಪಿಲಿ ಅವರ ಮೇಲಿನ ಅಭಿಮಾನದಿಂದ ಅಭಿಮಾನಿ ಬಳಗ ಕಟ್ಟಿದ್ದೇವೆ. ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷಾತೀತ ಕೆಲಸ ಮಾಡುವ ನಾಯಕ. ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹೇಳಿದರು.ಸಂಘಟನೆಯನ್ನು, ಯುವಕರನ್ನು ಹೇಗೆ ಬೆಳೆಸಬೇಕು ಎಂದು ಅರಿತು, ಜವಾಬ್ದಾರಿಯನ್ನು
ಸಮರ್ಥವಾಗಿ ನಿಭಾಯಿಸಿ ಜನ ನಾಯಕನಾಗಿ ಬೆಳೆದಿದ್ದಾರೆ ಎಂದರು.
ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿನಯಕುಮಾರ್ ಮುಳುಗಾಡು, ಸಾಂದೀಪ್ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಿ ಸದಾಶಿವ ಉಪಸ್ಥಿತರಿದ್ದರು.
ಹರೀಶ್ ಕಂಜಿಪಿಲಿ ಅಭಿಮಾನಿ ಬಳಗದ ನಿಕೇಶ್ ಉಬರಡ್ಕ ಸ್ವಾಗತಿಸಿ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ವಂದಿಸಿದರು. ಸುನಿಲ್ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.