ಸುಳ್ಯ:ವಿದ್ಯುತ್ ಲೈನ್ಗಳ ಬ್ರೇಕ್ ಡೌನ್ ಕಾಮಗಾರಿ ದರದಲ್ಲಿ ತೀವ್ರ ಇಳಿಕೆ ಮಾಡಿರುವ ಕಾರಣ ಕಾಮಗಾರಿಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಆದುದರಿಂದ ಮುಂದಿನ ಸೋಮವಾರದಿಂದ ಬ್ರೇಕ್ ಡೌನ್ ಕಾಮಗಾರಿ ಸ್ಥಗಿತಗೊಳಿಸಲು ನಿರ್ಧಾರಿಸಲಾಗಿದೆ ಎಂದು ಕರ್ನಾಟಕ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸೋಮಶೇಖರ ಪೈಕ ಕರ್ನಾಟಕ ರಾಜ್ಯ ಅನುಮತಿ ಪಡೆದ
ವಿದ್ಯುತ್ ಗುತ್ತಿಗೆದಾರರಾದ ನಾವು ಮೆಸ್ಕಾಂ ಜೊತೆಗೂಡಿ ಹಲವು ವರ್ಷಗಳಿಂದ ತುರ್ತು ಕಾಮಗಾರಿಗಳಲ್ಲಿ ಒಂದಾದ ವಿದ್ಯುತ್ ಲೈನ್ಗಳ ಬ್ರೇಕ್ ಡೌನ್ ಕಾಮಗಾರಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅತೀ ಶೀಘ್ರದಲ್ಲಿ ನಡೆಸಿಕೊಂಡು ಬಂದಿರುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಮೆಸ್ಕಾಂ ನೀಡುತ್ತಿದ್ದ ಬ್ರೇಕ್ ಡೌನ್ ಕಾಮಗಾರಿ ದರದಲ್ಲಿ ಬಾರಿ ಇಳಿಕೆಯಾಗಿದೆ. ಹಾಗೂ ಈ ಹಿಂದೆ ಇದ್ದ ಬ್ರೇಕ್ ಡೌನ್ ಕಾಮಗಾರಿಗಳ ಪ್ರಾದೇಶಿಕ ಭತ್ಯೆ ಸಾಗಾಣಿಕಾ ವೆಚ್ಚ ಹಾಗೂ ಬ್ರೇಕ್ ಡೌನ್ ಭತ್ಯೆಗಳನ್ನು ರದ್ದುಗೊಳಿಸಿ, ಕೇವಲ 12% ಭತ್ಯೆಯನ್ನು ನೀಡುತ್ತಿದ್ದು, ಇದರಿಂದ ವಿದ್ಯುತ್ ಗುತ್ತಿಗೆದಾರರು ಭಾರಿ ನಷ್ಟ ಅನುಭವಿಸುತ್ತಿದ್ದೇವೆ. ಈ ಹಿಂದೆಯು ಇದರ ಬಗ್ಗೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದುದ್ದರಿಂದ ವಿದ್ಯುತ್ ಗುತ್ತಿಗೆದಾರರಾದ ನಾವು ಬ್ರೇಕ್ ಡೌನ್ ಕೆಲಸಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಿರುತ್ತೇವೆ. ಇದರಿಂದಾಗುವ ಸಾರ್ವಜನಿಕ ತೊಂದರೆಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ ಎಂದು ಹೇಳಿದರು.
ಬ್ರೇಕ್ ಡೌನ್ ಕಾಮಗಾರಿಗಳಲ್ಲಿ ಈ ಹಿಂದಿನಂತೆಯೇ ಪ್ರಾದೇಶಿಕ, ಸಾಗಾಣಿಕಾ ವೆಚ್ಚ ಹಾಗೂ ಬ್ರೇಕ್ ಡೌನ್ ಭತ್ಯೆಗಳನ್ನು ನೀಡಿದ್ದಲ್ಲಿ ಮಾತ್ರ ಕೆಲಸಗಳನ್ನು ಮುಂದುವರಿಸಲು ಸಾಧ್ಯ ಎಂದು ಅವರು ಹೇಳಿದರು.
ತುರ್ತು ಸಂದರ್ಭದಲ್ಲಿ ಮುರಿದ ಕಂಬಗಳ ಬದಲಾವಣೆ, ವಯರ್ಗಳ ಬದಲಾವಣೆ ದುರಸ್ತಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮಾಡಲಾಗುತ್ತದೆ. ಆದರೆ ಈಗ ನೀಡುವ ದರದಿದಲ್ಲಿ ಕೆಲಸಗಾರರ ಸಂಬಳ, ವಾಹನ ಮತ್ತಿತರ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಆದುದರಿಂದ ಬ್ರೇಕ್ ಡೌನ್ ಕೆಲಸಗಳನ್ನು ಸ್ಥಗಿತ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮಾಯಿಲಪ್ಪ ಸಂಕೇಶ, ಕೆ.ಎಸ್.ಶ್ರೀಧರ, ಸುಳ್ಯ ಸಮಿತಿಯ ಕಾರ್ಯದರ್ಶಿ ಹರಿಶ್ಚಂದ್ರ, ಕೋಶಾಧಿಕಾರಿ ಮಧುಕಿರಣ್ ಕೆ.ಎನ್, ಜತೆ ಕಾರ್ಯದರ್ಶಿ ಸತ್ಯನಾರಾಯಣ, ಚಿದಾನಂದ ಎಂ, ಧನಂಜಯ, ರಾಮ ಜೋಯಿಸ ಉಪಸ್ಥಿತರಿದ್ದರು.