ಸುಳ್ಯ:ಕನ್ನಡ ಓದಿದರೆ ಕೆಲಸ ದೊರೆಯುವುದಿಲ್ಲ. ಇಂಗ್ಲಿಷ್ ಕಲಿತರೆ ಮಾತ್ರ ಉದ್ಯೋಗ ಸಿಗುತ್ತದೆ ಎಂಬ ಭಾವನೆ ಎಲ್ಲರಲ್ಲೂ ಬೆಳೆದು ಬಿಟ್ಟಿದೆ. ಇದು ಸರಿಯಲ್ಲ. ಕನ್ನಡ ಕಲಿತೇ ಸಾಕಷ್ಟು ಉನ್ನತ ಸ್ಥಾನಗಳಿಗೆ ಹೋದವರು ಅನೇಕರಿದ್ದಾರೆ. ಹಾಗಾಗಿ ನಮ್ಮ ಮಕ್ಕಳಿಗೆ 5ನೇ ತರಗತಿಯವರೆಗೆ ರಾಜ್ಯ ಭಾಷೆಯಲ್ಲೇ ಪಾಠ ಮಾಡಬೇಕು. ಯಾಕೆಂದರೆ ಗೊತ್ತಿರುವ ಭಾಷೆಯಲ್ಲಿ ಕಲಿತಾಗ ವಿಷಯಗಳು ಬಹಳ ವೇಗವಾಗಿ ಅರ್ಥವಾಗುತ್ತದೆ. ಯಾವುದೇ
ಭಾಷೆ ಕಲಿತರೂ ತಾಯಿನುಡಿಯನ್ನು ಕಲಿಯಿರಿ,ಅದನ್ನು ಮರೆಯಬೇಡಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾದ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು. ಅವರು ಸುಳ್ಯದ ಸ್ನೇಹ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು ಮತ್ತು ಪೋಷಕರನ್ನುದ್ದೇಶಿಸಿ ಮಾತನಾಡಿದರು.ಡಾ. ಬಿಳಿಮಲೆಯವರನ್ನು ಶಾಲು ಹೊದೆಸಿ ಹಾರ ಹಾಕಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸ್ನೇಹ ಶಿಕ್ಷಣ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ವಹಿಸಿದ್ದರು.ನಮ್ಮ ಶಾಲೆ ಕನ್ನಡ ಮಾಧ್ಯಮ ಶಾಲೆ. ಕನ್ನಡ ಮಾಧ್ಯಮವಾಗಿಯೇ ಉಳಿದಿದೆ. ಇದಕ್ಕೆ ಕಾರಣ ಕನ್ನಡದ ಮೇಲಿರುವ ಪ್ರೀತಿ ಹಾಗೂ ಜ್ಞಾನವನ್ನು ಅರ್ಥ ಮಾಡಿಕೊಂಡು ಕಲಿಯಬೇಕೆಂಬ ನೀತಿ ಎಂದು ಹೇಳಿದರು.
ರಾಜ್ಯ ಅರೆ ಭಾಷೆ ಅಕಾಡೆಮಿಯ ಅಧ್ಯಕ್ಷರಾಗಿರುವ ಸದಾನಂದ ಮಾವಜಿ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ಉಪಸ್ಥಿತರಿದ್ದರು. ಸಾಹಿತ್ಯ ಪರಿಷತ್ ವತಿಯಿಂದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಚಿತ್ರಗಳನ್ನು ರಾಜ್ಯೋತ್ಸವದ ಪೂರ್ವಭಾವಿಯಾಗಿ ಅನಾವರಣಗೊಳಿಸಲಾಯಿತು. ಶಿಕ್ಷಕ ದೇವಿಪ್ರಸಾದ ಜಿ. ಸಿ. ಪಾಡ್ಡನ ಹೇಳುವ ಮೂಲಕ ಚಾಲನೆ ನೀಡಿದರು. ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿ, ಶಿಕ್ಷಕಿ ಗಾಯತ್ರಿ ಬಿ.ಎಸ್ ವಂದಿಸಿದರು. ಶಿಕ್ಷಕಿ ಶ್ರೀಮತಿ ಸವಿತಾ.ಎಂ. ನಿರೂಪಿಸಿದರು. ಈ ಸಂದರ್ಭದಲ್ಲಿ ಪೋಷಕರು , ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.