ಬೆಂಗಳೂರು:ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಐಪಿಎಲ್ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಸೋಲನುಭವಿಸಿದ ಬಳಿಕ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ‘ಫಿನಿಶರ್’ ‘ಡಿಕೆ’ ಎಂಬ ಅಚ್ಚುಮೆಚ್ಚಿನ ಹೆಸರಿನಿಂದ ಕರೆಯಲ್ಪಡುವ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್, ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ
ವಿದಾಯ ಹೇಳಿದ್ದಾರೆ ಎಂದು ವರದಿಯಾಗಿದೆ.ಪಂದ್ಯದ ಬಳಿಕ ಪರಸ್ಪರ ತಬ್ಬಿಕೊಂಡ ಕಾರ್ತಿಕ್ ಹಾಗೂ ವಿರಾಟ್ ಕೊಹ್ಲಿ ಭಾವುಕರಾಗಿ ಕಂಡುಬಂದರು. ಕೈಯಲ್ಲಿ ಗ್ಲೌ ಹಿಡಿದು ಡಿಕೆ ಅಭಿಮಾನಿಗಳತ್ತ ಕೈಬೀಸಿದರು. ಈ ಸಂದರ್ಭದಲ್ಲಿ ಕೊಹ್ಲಿ ಸೇರಿದಂತೆ ಆರ್ಸಿಬಿ ಆಟಗಾರರು ಕೈಚಪ್ಪಾಳೆ ತಟ್ಟುತ್ತಾ ಡಿಕೆ ಅವರನ್ನು ಹಿಂಬಾಲಿಸಿದರು. ಆ ಮೂಲಕ ಕಾರ್ತಿಕ್ ಅವರಿಗೆ ಗೌರವವನ್ನು ತೋರಿದರು. ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರು ಸಹ ಡಿಕೆ ಅವರನ್ನು ತಬ್ಬಿಕೊಂಡು ಶುಭ ಹಾರೈಸಿದರು.ಅಂದ ಹಾಗೆ ನಿವೃತ್ತಿ ಬಗ್ಗೆ ದಿನೇಶ್ ಕಾರ್ತಿಕ್ ಇನ್ನಷ್ಟೇ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.
ಕಾರ್ತಿಕ್ ತಮ್ಮ ಕೊನೆಯ ಇನ್ನಿಂಗ್ಸ್ನಲ್ಲಿ 13 ಎಸೆತಗಳಲ್ಲಿ 11 ರನ್ ಗಳಿಸಿದರು. ಈ ಐಪಿಎಲ್ ತನ್ನ ವೃತ್ತಿಜೀವನದ ಕೊನೆಯ ಸೀಸನ್ ಆಗಲಿದೆ ಎಂದು ಋತುವಿನ ಆರಂಭಕ್ಕೂ ಮುನ್ನ ಕಾರ್ತಿಕ್ ಹೇಳಿದ್ದರು.
17 ವರ್ಷಗಳ ಐಪಿಎಲ್ ವೃತ್ತಿ ಜೀವನದಲ್ಲಿ ದಿನೇಶ್ ಕಾರ್ತಿಕ್ ಒಟ್ಟು 6 ತಂಡಗಳ ಪರ ಅದಿದ್ದರು. ಈ ವೇಳೆ 2013 ರಲ್ಲಿ ಮುಂಬೈ ಇಂಡಿಯನ್ಸ್ ಪರ ಅವರು ಟ್ರೋಫಿ ಗೆದ್ದಿದ್ದರು. ಇದಾದ ಬಳಿಕ ಹಲವು ತಂಡಗಳ ಪರ ಆಡಿದರೂ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಆಗಲಿಲ್ಲ.