ಚೆನ್ನೈ: ಕೆ.ಎಲ್. ರಾಹುಲ್ ಆಕರ್ಷಕ ಬ್ಯಾಟಿಂಗ್ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ನಲ್ಲಿ ‘ಹ್ಯಾಟ್ರಿಕ್ ಗೆಲುವು ಸಾಧಿಸಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡವು 25 ರನ್ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿತು. ಚೆನ್ನೈ ತಂಡಕ್ಕೆ ಇದು ಸತತ ಮೂರನೇ ಸೋಲು. ಟಾಸ್ ಗೆದ್ದ ಡೆಲ್ಲಿ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕೆ.ಎಲ್.ರಾಹುಲ್ ಆಕರ್ಷಕ ಬ್ಯಾಟಿಂಗ್ ಮೂಲಕ
ಇನಿಂಗ್ಸ್ ಕಟ್ಟಿದರು. ಅವರಿಗೆ ಅಭಿಷೇಕ್ ಪೊರೆಲ್ ಉತ್ತಮ ಜೊತೆ ನೀಡಿದರು. ರಾಹುಲ್ (77; 51ಎ, 4X6, 6X3) ಮತ್ತು ಅಭಿಷೇಕ್ (33; 20ಎ, 4X4, 6X1) ಎರಡನೇ ವಿಕೆಟ್ ಜೊತೆಯಾಟದಲ್ಲಿ 53 ರನ್ ಸೇರಿಸಿದರು. ಇದರಿಂದಾಗಿ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 183 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ತಂಡದ ಆರಂಭ ಚೆನ್ನಾಗಿರಲಿಲ್ಲ. 41 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು. ವಿಪ್ರಜ್ ನಿಗಮ್ (27ಕ್ಕೆ2) ಮತ್ತು ಮುಕೇಶ್ ಕುಮಾರ್ (36ಕ್ಕೆ1) ಅವರ ದಾಳಿಯ ಮುಂದೆ ತಂಡದ ರನ್ ಗಳಿಕೆ ವೇಗ ಕುಸಿಯಿತು. ಮಧ್ಯಮ ಕ್ರಮಾಂಕದಲ್ಲಿ ವಿಜಯಶಂಕರ್ (ಔಟಾಗದೇ 69; 54ಎ, 4X5, 6X1) ಮತ್ತು ಅನುಭವಿ ಮಹೇಂದ್ರಸಿಂಗ್ ಧೋನಿ (ಔಟಾಗದೇ 30; 26ಎ, 4X1, 6X1) ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಡೆಲ್ಲಿ ಬೌಲರ್ಗಳು ಬಿಗಿ ಹಿಡಿತ ಸಾಧಿಸಿದರು. ಇದರಿಂದಾಗಿ ಚೆನ್ನೈ ಬಳಗಕ್ಕೆ 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 158 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.