ಮಡಿಕೇರಿ:ಅರೆಭಾಷಿಕ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ಅಧ್ಯಕ್ಷರು ಹಾಗೂ ಖ್ಯಾತ ವೈದ್ಯರಾದ ಡಾ.ಕೆ.ವಿ.ಚಿದಾನಂದ ಗೌಡ ಸುಳ್ಯ ಇವರು ತಮ್ಮ ಮಾತೃಶ್ರೀಯವರಾದ ದಿ.ಜಾನಕಿ ವೆಂಕಟ್ರಮಣ ಗೌಡ ಇವರ ಸ್ಮರಣಾರ್ಥ ದತ್ತಿನಿಧಿ ಸ್ಥಾಪಿಸಿದ್ದಾರೆ. ದತ್ತಿನಿಧಿ ರೂ.1.50 ಲಕ್ಷವನ್ನು
ಶಾಶ್ವತ ಠೇವಣಿ ಇರಿಸಿ ಅದರಲ್ಲಿ ಬರುವ ಬಡ್ಡಿಯ ಮೊತ್ತದಿಂದ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ರಾಜ್ಯ ಪಠ್ಯಕ್ರಮದ 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸುವ ಅರೆಭಾಷಿಕ ದಕ್ಷಿಣ ಕನ್ನಡ ಮತ್ತ್ತು ಕೊಡಗು ಜಿಲ್ಲೆಯ ತಲಾ ಒಬ್ಬರಿಗೆ ನಗದು ರೂಪದಲ್ಲಿ ಪ್ರೋತ್ಸಾಹಧನ ನೀಡಲಾಗುವುದು.
ಈ ಪ್ರೋತ್ಸಾಹಧನವನ್ನು ವಿಶ್ವ ಮಹಿಳಾ ದಿನಾಚರಣೆಯಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಯುವ ಕಾರ್ಯಕ್ರಮ ಸಂದರ್ಭದಲ್ಲಿ ಪ್ರೋತ್ಸಾಹಧನ ವಿತರಿಸಲಾಗುವುದು. ಹಾಗೆಯೇ ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದತ್ತಿನಿಧಿ ಸ್ಥಾಪಿಸಿರುವ ಡಾ.ಕೆ.ವಿ.ಚಿದಾನಂದ ಗೌಡ ಅವರಿಗೆ ಅಕಾಡೆಮಿ ವತಿಯಿಂದ ಅಭಿದನಂದನೆಗಳು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.