ಕೋಲ್ಕತ್ತಾ: ಐಪಿಎಲ್ ಪ್ಲೇಆಫ್ ರೇಸ್ನಿಂದ ಹೊರಬಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕೊನೆಗೂ ತನ್ನ ಸೋಲಿನ ಸರಣಿಯನ್ನು ಕೊನೆಗೊಳಿಸಿದ್ದು ಪಂದ್ಯಾವಳಿಯಲ್ಲಿ ತನ್ನ ಮೂರನೇ ಗೆಲುವು ದಾಖಲಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 2 ವಿಕೆಟ್ಗಳಿಂದ ಸೋಲಿಸುವಲ್ಲಿ ಸಿಎಸ್ಕೆ ಯಶಸ್ವಿಯಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ
ಕೋಲ್ಕತ್ತಾ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ಗೆಲುವಿಗೆ 180 ರನ್ ಗಳ ಗುರಿಯನ್ನು ನೀಡಿತು. ಈ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಪರ ಸುನಿಲ್ ನರೈನ್ 26 ರನ್ ಗಳಿಸಿದರೆ, ನಾಯಕ ಅಜಿಂಕ್ಯ ರಹಾನೆ 33 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ಗಳಿಂದ 48 ರನ್ ಗಳಿಸಿದರು, ಮನೀಶ್ ಪಾಂಡೆನ್ ಅಜೇಯ 38 ರನ್ ಗಳಿಸಿದರೆ, ಆಂಡ್ರೆ ರಸೆಲ್ 21 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ಗಳೊಂದಿಗೆ 38 ರನ್ ಗಳಿಸಿ ಔಟಾದರು. ಈ ರನ್ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕಳಪೆ ಆರಂಭವನ್ನು
ಪಡೆಯಿತು. ಆರಂಭಿಕರಾದ ಆಯುಷ್ ಮ್ಹಾತ್ರೆ ಮತ್ತು ಡೆವೊನ್ ಕಾನ್ವೇ ಖಾತೆ ತೆರೆಯದೆ ಔಟಾದರು. ಆದರೆ ಚೊಚ್ಚಲ ಪಂದ್ಯವನ್ನಾಡಿದ ಉರ್ವಿಲ್ ಪಟೇಲ್11 ಎಸೆತಗಳಲ್ಲಿ ಆಕ್ರಮಣಕಾರಿಯಾಗಿ 31 ರನ್ ಗಳಿಸಿದರು. ರವಿಚಂದ್ರನ್ ಅಶ್ವಿನ್ 8 ರನ್ ಗಳಿಸಿ ಔಟಾದರೆ, ರವೀಂದ್ರ ಜಡೇಜ 19 ರನ್ ಗಳಿಸಿ ಔಟಾದರು. ಆದ್ದರಿಂದ, ಈ ಪಂದ್ಯವು ಕೋಲ್ಕತ್ತಾ ಪರವಾಗಿ ವಾಲಿತು. ಆದರೆ ಡೆವೋಲ್ಡ್ ಬ್ರೆವಿಸ್ ಮತ್ತು ಶಿವಂ ದುಬೆ ಉತ್ತಮ ಜೊತೆಯಾಟವಾಡಿದರು. ಡೆವೋಲ್ಡ್ 25 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ಗಳೊಂದಿಗೆ 52 ರನ್ ಗಳಿಸಿದರೆ, ಶಿವಂ ದುಬೆ ತಾಳ್ಮೆಯ ಆಟವಾಡಿ 40 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ಗಳೊಂದಿಗೆ 45 ರನ್ ಗಳಿಸಿ ಔಟಾದರು. ಈ ಹಂತದಲ್ಲಿ ಸಿಎಸ್ಕೆ ತಂಡಕ್ಕೆ 8 ಎಸೆತಗಳಲ್ಲಿ 10 ರನ್ ಬೇಕಾಗಿತ್ತು.
ಕೊನೆಗೆ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ 6 ಎಸೆತಗಳಲ್ಲಿ 8 ರನ್ಗಳ ಅಗತ್ಯವಿತ್ತು. ಸ್ಟ್ರೈಕ್ನಲ್ಲಿದ್ದ ಮಹೇಂದ್ರ ಸಿಂಗ್ ಧೋನಿ, ಆಂಡ್ರೆ ರಸೆಲ್ ಅವರ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ಹೀಗಾಗಿ 5 ಎಸೆತಗಳಲ್ಲಿ 2 ರನ್ ಬೇಕಾಗಿತ್ತು. ಮೂರನೇ ಎಸೆತದಲ್ಲಿ ಧೋನಿ ಸಿಂಗಲ್ ತೆಗೆದುಕೊಂಡು ಪಂದ್ಯವನ್ನು ಸಮಬಲಗೊಳಿಸಿದರು. ಮೂರು ಎಸೆತಗಳಲ್ಲಿ ಒಂದು ರನ್ ಬೇಕಿತ್ತು. ನಾಲ್ಕನೇ ಎಸೆತದಲ್ಲಿ ಕಾಂಬೋಜ್ ಬೌಂಡರಿ ಬಾರಿಸಿ ಗೆಲುವು ಖಚಿತಪಡಿಸಿದರು.







