ಸುಳ್ಯ:ಸೂಕ್ತ ಆಹಾರ ಮತ್ತು ಜೀವನ ಶೈಲಿಯಿಂದ ರೋಗಳಿಂದ ದೂರವಾಗಿ ಆರೋಗ್ಯ ರಕ್ಷಣೆ ಸಾಧ್ಯ. ಆರೋಗ್ಯ ಜಾಗೃತಿ ಅರಿವಿನಿಂದ ಕ್ಯಾನ್ಸರ್ನಂತಹಾ ಮಹಾರೋಗಳು ಬರದಂತೆ ತಡೆಯಬಹುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ
ರೋಟರಿ ಕ್ಲಬ್ ಸುಳ್ಯ ಮತ್ತು ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ‘ಅರಿವೇ ಜೀವ – ಬದುಕು’ ಕ್ಯಾನ್ಸರ್ ಜಾಗೃತಿ ಮಹಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾಗೃತಿ ಮೂಡಿಸುವುದೇ ಇದನ್ನು ತಡೆಗಟ್ಟುವ ಏಕೈಕ ಮಾರ್ಗ. ಇಂತಹ ಅಭಿಯಾನಗಳು ಪ್ರತಿ ಮನೆಗೂ ತಲುಪಬೇಕು
ಎಲ್ಲಾ ಸಂಘ ಸಂಸ್ಥೆಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಕ್ಯಾನ್ಸರ್ ಮಾಹಿತಿ ನೀಡಬೇಕಾದ ಅನಿವಾರ್ಯತೆ ಇದೆ. ರೋಟರಿ ಮತ್ತು ಪತ್ರಕತ೯ರ ಈ ಕೆಲಸ ಶ್ಲಾಘನೀಯ ಎಂದು ಅವರು ಹೇಳಿದರು.
ಆರೋಗ್ಯವಂತ ಸಮಾಜ ನಿರ್ಮಾಣ ಅಂದರೆ ಅದು ಈಗಿನ ಮಕ್ಕಳಿಂದ

ಮಾತ್ರ ಸಾಧ್ಯ. ಅದಕ್ಕಾಗಿಯೇ ಶಾಲಾ ಆವರಣದಲ್ಲಿ ಜಂಕ್ ಫುಡ್ ಮಾರಾಟ ನಿಷೇಧಿಸಲಾಗಿದೆ. ಆಹಾರವೇ ಔಷಧ, ಮಕ್ಕಳ ತಂದೆ ತಾಯಿ ಮಕ್ಕಳಿಗೆ ಯಾವ ರೀತಿಯ ಆಹಾರ ಅಗತ್ಯ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಯು. ಟಿ ಖಾದರ್ ಸಲಹೆ ನೀಡಿದರು.
ರೋಟರಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಶಾಸಕಿ ಭಾಗೀರಥಿ ಮುರುಳ್ಯ,ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ ಮುಖ್ಯ ಅತಿಥಿಯಾಗಿದ್ದರು. ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ್ ಅಧ್ಯಕ್ಷತೆ ವಹಿಸಿದ್ದರು ವೇದಿಕೆಯಲ್ಲಿ ರೋಟರಿ ಶಾಲಾ ಸಂಚಾಲಕ ಪ್ರಭಾಕರನ್ ನಾಯರ್, ರೋಟರಿ ಕ್ಲಬ್ ಸದಸ್ಯ ಮಧುಸೂದನ್ ಕುಂಭಕೋಡು ಇದ್ದರು.
ಸುಳ್ಯ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜೊತೆ ಸಚಿವ ಯು. ಟಿ ಖಾದರ್ ಅವರು ಫೋಟೋ ಕ್ಲಿಕ್ಕಿಸಿಕೊಂಡರು.












