ಸುಳ್ಯ:ಮಳೆಗಾಲದಲ್ಲಿ ಎದುರಾಗುವ ಪ್ರಾಕೃತಿಕ ವಿಕೋಪವನ್ನು ತಡೆಯಲು ಅಗತ್ಯವಾದ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ನಡೆಸಬೇಕು. ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಂಡವಾಗಿ ಕೆಲಸ ಮಾಡಬೇಕು ಎಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಾಕೃತಿಕ ವಿಕೋಪ ನಿರ್ವಹಣೆ ಕುರಿತ ಸಭೆಯು ಅಧಿಕಾರಿಗಳಿಗೆ ನಿರ್ದೇಶನ ನೀಡಿತು.ತಹಶೀಲ್ದಾರ್ ಜಿ.ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಳಯ, ಪ್ರಾಕೃತಿಕ ವಿಕೋಪ ಉಂಟಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ, ಮುನ್ನೆಚ್ಚರಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಯಿತು. ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಕಳೆದ ಬಾರಿ ಎಲ್ಲೆಲ್ಲಾ ಅನಾಹುತಗಳು, ಹಾನಿ ಆಗಿದೆ ಅಲ್ಲೆಲ್ಲಾ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಕಾಳಜಿ ಕೇಂದ್ರಗಳು ತೆರೆಯಬೇಕಾದ ಸ್ಥಳಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಅಗ್ನಿಶ್ಯಾಮಕ ದಳ ಎಲ್ಲಾ ಅಗತ್ಯ ಸಿದ್ಧತೆ ಮಾಡಿರಬೇಕು. ತಜ್ಞ ಈಜುಗಾರರ, ಜೆಸಿಬಿ ಯಂತ್ರಗಳ ಲಭ್ಯತೆಯ ಬಗ್ಗೆ ಮಾಹಿತಿ ಸಂಗ್ರಹಿಸಿಡಬೇಕು. ಅಪಾಯಕಾರಿ ಮರಗಳ ತೆರವಿಗೆ,
ಕಿಂಡಿ ಅಣೆಕಟ್ಟುಗಳಲ್ಲಿ ಸಿಲುಕಿರುವ ಮರ, ಕಸ ಕಡ್ಡಿಗಳ ತೆರವಿಗೆ ಸೂಚನೆ ನೀಡಲಾಯಿತು.ತಗ್ಗು ಪ್ರದೇಶ, ನೀರು ನುಗ್ಗುವ, ಬರೆ, ಗುಡ್ಡ ಕುಸಿತ ಸಾಧ್ಯತೆ ಮತ್ತಿತರ ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುವ ಜನರ ಸ್ಥಳಾಂತರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಅಂತಹಾ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಮುಂಜಾಗೃತಾ ನಿರ್ದೇಶನಗಳನ್ನು ನೀಡಬೇಕು ಎಂದು ಸೂಚಿಸಲಾಯಿತು. ಸ್ಥಳೀಯ ಜನರನ್ನು ಸೇರಿಸಿ ತಂಡ ರಚಿಸಬೇಕು. ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿದ್ದು ಸರ್ವ ಸನ್ನದ್ಧರಾಗಿರಬೇಕು ಎಂದು ಸೂಚಿಸಿದರು. ಜಾನುವಾರುಗಳ ರಕ್ಷಣೆಗೆ ಆದ್ಯತೆ ನೀಡಬೇಕು. ಮಣ್ಣು ಕುಸಿತ ಮತ್ತಿತರ ಅಪಾಯಕಾರಿ ಪ್ರದೇಶಗಳ ಪಟ್ಟಿಯನ್ನು ತಯಾರಿಸಿ ಎರಡು ದಿನದಲ್ಲಿ ತಾಲೂಕು
ಆಡಳಿತಕ್ಕೆ ಸಲ್ಲಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶ ನೀಡಲಾಯಿತು. ಚರಂಡಿಗಳ ನಿರ್ವಹಣೆಗೆ ಕ್ರಮಕ್ಕೆ ಸೂಚಿಸಲಾಯಿತು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲು ಬೇಕಾದ ಅಗತ್ಯ ವಸ್ತುಗಳ ಪಟ್ಟಿಯನ್ನು ತಯಾರಿಸಿ ನೀಡಿ ಎಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದರು.
ಸಂಪಾಜೆ ನದಿಯಲ್ಲಿ ಹೂಳು-ಜಿಲ್ಲಾಡಳಿತಕ್ಕೆ ವರದಿ:
ಸಂಪಾಜೆಯಲ್ಲಿ ನದಿಯ ಹೂಳೆತ್ತದ ಕಾರಣ ಮತ್ತೆ ಪ್ರಳಯ ಭೀತಿ ಉಂಟಾಗಿರುವುದರಿಂದ ಗ್ರಾಮ ಪಂಚಾಯತ್ ಸದಸ್ಯರು ಧರಣಿ ನಡೆಸುವುಸುವುದಾಗಿ ಘೋಷಿಸಿರುವ ಬಗ್ಗೆ ಚರ್ಚೆ ನಡೆಯಿತು. ಹೂಳೆತ್ತಲು ಪೂರಕವಾದ ನೆಲೆಯಲ್ಲಿ ತಾಲೂಕು ಆಡಳಿತದಿಂದ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದ್ದು ಹೂಳೆತ್ತಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ನದಿಗಳಲ್ಲಿ ತುಂಬಿರುವ ಹೂಳು, ಮರಳು ತೆರವು ಮಾಡುವ ಬಗ್ಗೆ ಜಂಟಿ ಸರ್ವೆ ಮಾಡಲಾಗಿದೆ ಎಂದು ತಹಶಿಲ್ದಾರ್ ಮಂಜುನಾಥ್ ಹೇಳಿದರು.