ಸುಳ್ಯ:ಕುಕ್ಕುಜಡ್ಕದ ಚೊಕ್ಕಾಡಿ ಎಜ್ಯುಕೇಷನ್ ಸೊಸೈಟಿ ಪ್ರವರ್ತಿತ ಚೊಕ್ಕಾಡಿ ಪ್ರೌಢ ಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿರುವ ಚೊಕ್ಕಾಡಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡಲಾಗುತ್ತಿದೆ ಎಂದು ಚೊಕ್ಕಾಡಿ ಎಜ್ಯುಕೇಷನ್ ಸೊಸೈಟಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಎಸ್.ಅಂಗಾರ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಮರ ಮುಡ್ನೂರು ಹಾಗೂ
ಅಮರ ಪಡ್ನೂರು ಗ್ರಾಮಗಳು ಶಿಕ್ಷಣ, ಸಾಹಿತ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಕೊಡುಗೆ ನೀಡಿದೆ. ಚೊಕ್ಕಾಡಿ ಶಾಲೆಯ ಹಿರಿಮೆ ಮತ್ತೊಮ್ಮೆ ಮರುಕಳಿಸಬೇಕು ಎಂದು ಅದ್ದೂರಿಯಾಗಿ ಸುವರ್ಣ ಮಹೋತ್ಸವ ಆಚರಿಸಿದೆ. ಸುವರ್ಣ ಮಹೋತ್ಸವದ ಸಂಭ್ರಮದ ಜೊತೆಗೆ ಶಾಲೆಯಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಫಲಿತಾಂಶ ಬಂದಿದೆ. ಗ್ರಾಮೀಣ ಭಾಗದಲ್ಲಿ ಗುಣ ಮಟ್ಟದ ಶಿಕ್ಷಣ ನೀಡುವ ಕಾರ್ಯವನ್ನು ಮುಂದುವರಿಸಲಾಗುವುದು. ಪೋಷಕರು
ವಿದ್ಯಾರ್ಥಿಗಳನ್ನು ಹೆಚ್ಚು ಸೇರ್ಪಡೆ ಮಾಡುವ ಮೂಲಕ ಶಾಲೆಯ ಬೆಳವಣಿಗೆಗೆ ಕೊಡುಗೆ ನೀಡಬೇಕಯಲು ಎಂದು ಅವರು ಹೇಳಿದರು.
ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ 1973ರಲ್ಲಿ ಸ್ಥಾಪನೆಗೊಂಡು ಮೊದಲ ನಾಲ್ಕು ವರ್ಷಗಳ ಕಾಲ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶವನ್ನು ದಾಖಲಿಸಿತ್ತು. ತದನಂತರ ಉತ್ತಮ ಫಲಿತಾಂಶ ದಾಖಲಿಸುತ್ತಾ ಬಂದಿರುವ ಹೆಗ್ಗಳಿಕೆ ಶಾಲೆಯದ್ದು. ಈ ವರ್ಷ ಸುವರ್ಣ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಿ ಜನ ಮೆಚ್ಚುಗೆಯನ್ನು ಪಡೆದ ಶಾಲೆ 100% ಫಲಿತಾಂಶ ದಾಖಲಿಸಿರುವುದು ದಾಖಲೆಯೇ ಸರಿ. ಸುವರ್ಣ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸುವರ್ಣದ ತಿಲಕವನ್ನಿಟ್ಟಂತಾಗಿದೆ. ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸುಮಾರು ಎರಡು ತಿಂಗಳು ಪಾಠ ಪ್ರವಚನಗಳಿಗೆ ಸ್ವಲ್ಪ ಹಿನ್ನಡೆಯಾಗಿದ್ದರೂ ವಿದ್ಯಾರ್ಥಿಗಳು ಸುವರ್ಣ ಮಹೋತ್ಸವದಲ್ಲೂ ಭಾಗಿಯಾಗಿ ಒಳ್ಳೆಯ ಅಂಕಗಳನ್ನು ಗಳಿಸುವಲ್ಲಿ ಸಫಲರಾಗಿದ್ದಾರೆ. ಶಾಲೆಯ ಎಲ್ಲಾ ಶಿಕ್ಷಕರೂ ಈ ಫಲಿತಾಂಶ ಗಳಿಸುವಲ್ಲಿ ಅವಿಶ್ರಮವಾಗಿ ಪ್ರಯತ್ನಿಸಿದ್ದಾರೆ. ಒಟ್ಟು 28 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, 7 ವಿಶಿಷ್ಟ ಶ್ರೇಣಿ, 12 ಪ್ರಥಮ ಶ್ರೇಣಿ, 05 ದ್ವಿತೀಯ ಶ್ರೇಣಿ, 04 ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರೇಣುಕಾ ಎನ್-582, ದೀಪ್ತಿ ಪಿ-556, ಶ್ರೀಹಸ್ತಾ ಕೆ ಎಸ್- 551, ಹರ್ಷಿತಾ ಕೆ 545, ರಚಿತಾ ಎಂ.ಪಿ -542, ನಿತೇಶ್ ಬಿ-542, ಮನ್ವಿತ್ ಎಂ.ಪಿ-540 ಅಂಕ ಪಡೆದಿದ್ದಾರೆ.
ಕನ್ನಡ ಮಾಧ್ಯಮ: ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ 8 ಮತ್ತು 9 ನೇ ತರಗತಿಗಳಿಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಪ್ರಸ್ತುತ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಸರಕಾರದ ಶುಲ್ಕ ಹೊರತುಪಡಿಸಿ (ಅಭಿವೃದ್ಧಿ ಶುಲ್ಕ ರೂ 500 ಮತ್ತು ಶಾಲಾ ಶುಲ್ಕ ರೂ 220 ಒಟ್ಟು 720 ರೂ) ಬೇರೆ ಯಾವುದೇ ದೇಣಿಗೆಯನ್ನು ನಾವು ಪಡೆಯುವುದಿಲ್ಲ. ನಮ್ಮ ಶಾಲೆಯಲ್ಲಿ ವಿಶೇಷವಾಗಿ ಸುಸಜ್ಜಿತ ಪ್ರಯೋಗಾಲಯ ಇದೆ. ಜಿಮ್ ತರಗತಿಗಳು ಮತ್ತು ಕ್ರೀಡಾ ತರಬೇತಿಗಳು ನಡೆಯುತ್ತಿದೆ.
ಆಂಗ್ಲ ಮಾಧ್ಯಮ:
ಪ್ರಸ್ತುತ ಆಂಗ್ಲ ಮಾಧ್ಯಮದಲ್ಲಿ ಎಲ್.ಕೆ ಜಿ, ಯು.ಕೆ.ಜಿ ಹಾಗೂ 1 ರಿಂದ 8 ರ ವರೆಗೆ ತರಗತಿಗಳು ನಡೆಯುತ್ತಿದ್ದು ದಾಖಲಾತಿ ಆರಂಭಗೊಂಡಿದೆ ಎಂದು ಅಂಗಾರರು ವಿವರಿಸಿದರು.
ಮೇ.29 ರಂದು ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಚೊಕ್ಕಾಡಿ ಎಜ್ಯುಕೇಷನ್ ಸೊಸೈಟಿಯ ಸಂಚಾಲಕರಾದ ರಾಧಾಕೃಷ್ಣ ಬೊಳ್ಳೂರು ಮಾತನಾಡಿ ಎರಡೂ ಗ್ರಾಮಗಳ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಅತ್ಯುತ್ತಮ ವ್ಯವಸ್ಥೆ ಚೊಕ್ಕಾಡಿ ವಿದ್ಯಾ ಸಂಸ್ಥೆಗಳಲ್ಲಿ ಇದೆ. ಎರಡೂ ಗ್ರಾಮಗಳ ಪೋಷಕರು ತಮ್ಮ ಮಕ್ಕಳನ್ಬು ಶಾಲೆಗೆ ಹೆಚ್ಚು ಸಂಖ್ಯೆಯಲ್ಲಿ ಸೇರಿಕಸಬೇಕು ಎಂದರು.
ಶಾಲಾ ಮುಖ್ಯೋಪಾಧ್ಯಾಯ ಸಂಕೀರ್ಣ ಚೊಕ್ಕಾಡಿ, ಆಡಳಿತ ಮಂಡಳಿಯ ಖಜಾಂಜಿ ಹರ್ಷವರ್ಧನ ಬೊಳ್ಳೂರು, ನಿರ್ದೇಶಕ ಸತ್ಯಪ್ರಸಾದ್ ಪುಳಿಮಾರಡ್ಕ ಉಪಸ್ಥಿತರಿದ್ದರು.