ಮೈಸೂರು: ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಚೇತನೋತ್ಸವ- ಶಾಸ್ತ್ರೀಯ ನೃತ್ಯಗಳ ಉತ್ಸವ ಹಾಗೂ ವಸಂತ ಪಂಚಮಿ ಹಬ್ಬ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿ ಮಾತನಾಡಿ ‘ಯುವ ಪ್ರತಿಭೆಗಳ ಪ್ರೋತ್ಸಾಹಕ್ಕೆ ಅಕಾಡೆಮಿಯು ವೇದಿಕೆ ಒದಗಿಸಿದೆ. ಇದನ್ನು ಸದುಪಯೋಗ ಮಾಡಿಕೊಂಡು ಪ್ರತಿಭೆ ಅನಾವರಣ ಮಾಡಬೇಕು. ಪೋಷಕರು ಕೂಡ
ಪಠ್ಯದ ಜೊತೆಗೆ ಪತ್ಯೇತರ ಚಟುವಟಿಕೆಗಳಿಗೂ ಉತ್ತೇಜನ ನೀಡಬೇಕು ಎಂದರು. ಮೈಸೂರು ರಾಜಮಹಾರಾಜರ ಕಾಲದಿಂದಲೂ ಸಾಂಸ್ಕೃತಿಕವಾಗಿ ಹೆಸರು ಮಾಡಿದೆ. ಭರತನಾಟ್ಯ ಕೂಡ ಅದರಲ್ಲಿ ಒಂದಾಗಿದೆ. ಡಾ.ಚೇತನಾರಾಧಾಕೃಷ್ಣ ಅವರು ಮೈಸೂರು ಹಾಗೂ ಮಂಡ್ಯದಲ್ಲಿ ಶಾಖೆಗಳನ್ನು ನಡೆಸುತ್ತಾ ನೂರಾರು ಶಿಷ್ಯರನ್ನು ತಯಾರು ಮಾಡಿದ್ದಾರೆ ಎಂದು ಅವರು ಹೇಳಿದರು.

ಮುಖ್ಯಅತಿಥಿಯಾಗಿದ್ದ ಮಮ್ಮಿ ಮಿಲ್ಕ್ ಫುಡ್ಸ್ನ ಸಂಸ್ಥಾಪಕ ನಿರ್ದೇಶಕಿ ಅನಿತಾ ಸದಾನಂದ ಶುಕ್ಲಾ ಮಾತನಾಡಿದರು. ನಗರಪಾಲಿಕೆ ಮಾಜಿ ಸದಸ್ಯ ಎಸ್ಬಿಎಂ ಮಂಜು ಅಧ್ಯಕ್ಷತೆ ವಹಿಸಿದ್ದರು.ಅಕಾಡೆಮಿಯ ಸಂಸ್ಥಾಪಕಿ ಡಾ.ಚೇತನಾ ರಾಧಾಕೃಷ್ಣ ಪ್ರಾಸ್ತಾವಿಕ ಮಾತನಾಡಿ, ಅಕಾಡೆಮಿಯು ಪ್ರತಿ ವರ್ಷ ಮೈಸೂರು ಹಾಗೂ ಮಂಡ್ಯದಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬರುತ್ತದೆ. ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸುವುದರ ಜೊತೆಗೆ ಗುರುವಿಗೆ ಶಿಷ್ಯರು ಗುರುವಂದನೆ ಸಲ್ಲಿಸುವ ಸಂಪ್ರದಾಯಕ್ಕೂ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು. ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಪಿ.ಎಂ. ರಾಧಾಕೃಷ್ಣ ಉಪಸ್ಥಿತರಿದ್ದರು. ರಾಜನ್ ನಿರೂಪಿಸಿದರು. ವಿದಾತ್ರಿ ಪ್ರಾರ್ಥಿಸಿದರು.

ಗುರುದೇವ್ ಅಕಾಡೆಮಿ ಆಫ್ ಫ್ಫೈನ್ ಆರ್ಟ್ಸ್ ವತಿಯಿಂದ ನೀಡುವ ಗುರುದೇವ ಪ್ರಶಸ್ತಿಯನ್ನು ಆತ್ಮಲಯ ಅಕಾಡೆಮಿಯ ನಿರ್ದೆಶಕರಾದ
ಡಾ. ಪದ್ಮಜಾ ವೆಂಕಟೇಶ್ ಸುರೇಶ್ ಅವರಿಗೆ ನೀಡಲಾಯಿತು. 24-25ನೇ ಸಾಲಿನ ವಿವಿಧ ಭರತನಾಟ್ಯ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಚೇತನೋತ್ಸವದ ಅಂಗವಾಗಿ ಡಾ ಚೇತನ ರಾಧಾಕೃಷ್ಣ ಹಾಗೂ ಶಿಷ್ಯರು ಭರತನಾಟ್ಯ, ವಿವಿಧ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಪ್ರಸ್ತುತಿಪಡಿಸಿದರು.
