ಪಾಲಿ: ಹೇಳಿ ಕೇಳಿ ರಾಜಸ್ಥಾನ ಮರುಭೂಮಿ. ಒಣ ಪ್ರದೇಶ. ಇಂತಹಾ ಮರುಭೂಮಿಯಲ್ಲಿ ಹಸಿರು ನಳ ನಳಿಸುವಂತೆ ಮಾಡಲು ಪರಿಸರ ತಜ್ಞ,
ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ. ನಾಯರ್ ಪಣ ತೊಟ್ಟಿದ್ದಾರೆ. ರಾಜಸ್ಥಾನದ ಕಲುಷಿತ ಮತ್ತು ಅತ್ಯಂತ ಒಣ ಪ್ರದೇಶವಾದ ಪಾಲಿಯಲ್ಲಿ ಡಾ.ಆರ್.ಕೆ.ನಾಯರ್ ನೇತೃತ್ವದಲ್ಲಿ ಒಂದು ಲಕ್ಷ ಗಿಡ ನೆಡುವ ಯೋಜನೆಗೆ ಚಾಲನೆ ನೀಡಲಾಗಿದೆ. ಸಿಕ್ಕಿಂ ರಾಜ್ಯಪಾಲರಾದ ಓಂಪ್ರಕಾಶ್ ಮಾಥೂರ್ ಈ ಯೋಜನೆಗೆ ಚಾಲನೆ ನೀಡಿದರು. ಪಾಲಿ ಪ್ರದೇಶದಲ್ಲಿ
ಒಟ್ಟು 100 ಎಕ್ರೆ ಪ್ರದೇಶದಲ್ಲಿ 11 ಲಕ್ಷ ಗಿಡ ನೆಡುವ ಯೋಜನೆ ರೂಪಿಸಲಾಗಿದ್ದು ಪ್ರಥಮ ಹಂತದಲ್ಲಿ 10 ಎಕ್ರೆ ಸ್ಥಳದಲ್ಲಿ ಒಂದು ಲಕ್ಷ ಗಿಡಗಳನ್ನು ನೆಡಲಾಗುವುದು. ಬಾದಾಮಿ, ಮಹಾಗಣಿ, ರಕ್ತ ಚಂದನ, ನೇರಳೆ, ಹಲಸು, ಮಾವು, ಹೊಂಗೆ, ಸಾಗುವಾನಿ ಸೇರಿದಂತೆ ಸುಮಾರು 80 ವಿಧದ ಗಿಡಗಳನ್ನು ‘ಮಿಯಾವಾಕಿ’ ಮಾದರಿಯಲ್ಲಿ ಇಲ್ಲಿ ನೆಡಲಾಗುವುದು ಎಂದು ಡಾ.ಆರ್.ಕೆ.ನಾಯರ್ ‘ಸುಳ್ಯ ಮಿರರ್’ ಡಿಜಿಟಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕಳೆದ ಒಂದೂವರೆ ದಶಕಗಳಿಂದ ದೇಶದಾದ್ಯಂತ ಹಸಿರು ಪರಿಸರ ಸೃಷ್ಟಿಸುತ್ತಿರುವ ಸುಳ್ಯ ಜಾಲ್ಸೂರಿನವರಾದ ಡಾ.ಆರ್.ಕೆ.ನಾಯರ್ ಅವರು ನಿರ್ಮಾಣ ಮಾಡುತ್ತಿರುವ 122ನೇ ಕಾಡು ಇದಾಗಿದೆ. ಇದುವರೆಗೆ 121 ಕಾಡುಗಳನ್ನು ಸೃಷ್ಠಿಸಿ 32 ಲಕ್ಷಕ್ಕೂ ಅಧಿಕ ಮರ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ.
