ಸುಳ್ಯ:ಸುಳ್ಯ ತಾಲೂಕಿನಲ್ಲಿ ವ್ಯಾಪಕವಾಗಿ ಹರಡಿರುವ ಅಡಿಕೆ ಹಳದಿ ರೋಗ ಬಾದೆಯ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸುಳ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಕ್ಯಾಪ್ಟನ್ ಚೌಟ ತಿಳಿಸಿದ್ದಾರೆ. 72ನೇ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ
ಕ್ಯಾ.ಬ್ರಿಜೇಶ್ ಚೌಟ ಈ ವಿಷಯ ತಿಳಿಸಿದರು.ಲೋಕಸಭಾ ಕಲಾಪದ ಬಳಿಕ ಕೇಂದ್ರ ಕೃಷಿ ಸಚಿವರು ಸುಳ್ಯಕ್ಕೆ ಆಗಮಿಸಿ ಅಡಿಕೆ ಕೃಷಿಕರ ಜೊತೆಗೆ ಸಮಸ್ಯೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಕೃಷಿಕರ ಜೊತೆ ಸಂವಾದ ನಡೆಸಲಿದ್ದಾರೆ ಎಂದು ಅವರು ಹೇಳಿದರು.ಜಿಲ್ಲೆಯಾದ್ಯಂತ ಹಾಗೂ ಪ್ರಮುಖವಾಗಿ ಸುಳ್ಯ ತಾಲೂಕಿನಲ್ಲಿ ಅಡಿಕೆ ಹಳದಿ ರೋಗ , ಎಲೆಚುಕ್ಕೆ ರೋಗ ಬಾದೆಯಿಂದ ವ್ಯಾಪಕವಾಗಿ ಕೃಷಿ ಹಾನಿಯಾಗಿದೆ.ಕರಾವಳಿಯ ಸಂಸದರು ಕೇಂದ್ರ ಸಚಿವರನ್ನು ಭೇಟಿ ಮಾಡಿ ವಿವರಿಸಿದ್ದರು. ಈ ಕುರಿತು ಸಮಗ್ರ ಸಂಶೋಧನೆ, ಪರಿಹಾರ ಮಾಡುವ ಬಗ್ಗೆ ಭರವಸೆ ನೀಡಿದ್ದರು. ಬಳಿಕ ಕೇಂದ್ರ ಸರಕಾರದ ಸೂಚನೆಯ ಹಿನ್ನಲೆಯಲ್ಲಿ ಅಡಿಕೆ ಹಳದಿ ರೋಗದ ಬಗ್ಗೆ ಸಂಶೋಧನೆ ನಡೆಸಲು ಇಸ್ರೋ ಮತ್ತು ಸಿಪಿಸಿಸಿಆರ್ಐ ಡ್ರೋನ್ ಸರ್ವೆ ನಡೆಸಿದೆ. ಇದೀಗ ಸಚಿವರು ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ ಎಂದು ಕ್ಯಾಪ್ಟನ್ ಚೌಟ ಹೇಳಿದ್ದಾರೆ.











