ಸುಳ್ಯ:ಒಂದು ಮಳೆ ಬಂದರೆ ಕಾಂಕ್ರೀಟ್ ರಸ್ತೆಯಲ್ಲಿಯೇ ಹರಿಯುವ ಮಳೆ ನೀರು. ನೀರು ಹರಿಯಲು ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲಿಯೇ ಕೆಸರು ಮಿಶ್ರಿತ ಮಳೆ ನೀರು ನಿಂತು ಕೆಸರು ಗದ್ದೆಯಾಗುವ ರಸ್ತೆ. ಇದು ಮಳೆಗಾಲದ ರಥಬೀದಿ ರಸ್ತೆಯ ಪರಿಸ್ಥಿತಿ.ಚೆನ್ನಕೇಶವ ದೇವಸ್ಥಾನದ ವಾಣೀಜ್ಯ ಸಂಕೀರ್ಣದ ಮುಂಭಾಗದಲ್ಲಿ ಈ ರೀತಿಯ ಪರಿಸ್ಥಿತಿ ಎದುರಾಗುತ್ತದೆ. ನೀರು ಹರಿಯಲು ರಸ್ತೆಯ ಎರಡು ಬದಿಯಲ್ಲಿ
ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ಬಂದ ಕೂಡಲೇ ರಸ್ತೆಯ ಪರಿಸ್ಥಿತಿ ಅಯೋಮಯವಾಗುತ್ತದೆ. ವಾಹನಗಳು ವೇಗವಾಗಿ ಚಲಿಸುವಾಗ ಕೆಸರು ಆಳೆತ್ತರಕ್ಕೆ ಚಿಮ್ಮುತ್ತದೆ. ಇದರಿಂದ ಸಮೀಪದ ಅಂಗಡಿ ಮುಂಗಟ್ಟುಗಳಿಗೆ, ರಸ್ತೆ ಬದಿಯಲ್ಲಿ ನಡೆದಾಡುವ ಪಾದಾಚಾರಿಗಳಿಗೆ ಕೆಸರು ನೀರಿನ ಅಭಿಷೇಕ ಆಗುತ್ತದೆ. ಅಂಗಡಿಗಳಿಗೆ ತೆರಳುವ ಗ್ರಾಹಕರಿಗೆ ನಡೆದಾಡಲು, ವಾಹನ ಪಾರ್ಕಿಂಗ್ ಮಾಡಲು ತೀವ್ರ ತೊಂದರೆ ಉಂಟಾಗುತಿದೆ. ವಿದ್ಯಾರ್ಥಿಗಳು ಸೇರಿ ಸಾರ್ವಜನಿಕರಿಗೆ

ನಡೆದಾಡಲು ಆಗದ ಸ್ಥಿತಿ ಇದೆ.ರಸ್ತೆ ಉತ್ತಮವಾಗಿರುವ ಕಾರಣ ವಾಹನಗಳು ಶರವೇಗದಲ್ಲಿ ಸಂಚರಿಸುವುದು ಸಮಸ್ಯೆ ಸೃಷ್ಠಿಸುತ್ತಿದೆ.ಸಣ್ಣ ಮಳೆಗೂ ರಸ್ತೆಯು ಹೊಳೆಯಂತಾಗಿ ವಾಹನ ಚಾಲಕರಿಗೆ ಪಾದಚಾರಿಗಳಿಗೆ ಮತ್ತು ವ್ಯಾಪಾರಸ್ಥರಿಗೆ ನಿತ್ಯ ನರಕವಾಗುತಿದೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು.
ಪ್ರತಿ ವರ್ಷದ ಮಳೆಗಾಲದಲ್ಲಿಯೂ ಇಲ್ಲಿನ ಜನರಿಗೆ ಇದೇ ಯಾತನೆ.
ಅತೀ ಹೆಚ್ಚು ವಾಹನ ದಟ್ಟಣೆ ಇರುವ, ನೂರಾರು ವಾಹನಗಳು ಓಡಾಡುವ ಈ ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಹರಿದು ಹೋಗಲು ಕೂಡಲೇ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.






