ಸುಳ್ಯ:ಮಾದಕ ವಸ್ತುಗಳ ಹಾವಳಿ, ಫುಟ್ಪಾತ್ ಅತಿಕ್ರಮಣ, ಸಂಚಾರ ಸಮಸ್ಯೆ, ಗಡಿ ಭಾಗದ ಆಟೊರಿಕ್ಷಾಗಳಿಗೆ ವಿಧಿಸಲಾಗುತ್ತಿರುವ ದಂಡ ಸೇರಿದಂತೆ ವಿವಿಧ ಸಾರ್ವಜನಿಕ ಸಮಸ್ಯೆಗಳು ಭಾನುವಾರ ಕೇರ್ಪಳ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆದ ಪೊಲೀಸ್ ಇಲಾಖೆಯ ಸಾರ್ವಜನಿಕ ಜನಸಂಪರ್ಕ ಸಭೆಯಲ್ಲಿ ಚರ್ಚೆಗೆ ಬಂದವು.ದಕ್ಷಿಣ ಕನ್ನಡ ಜಿಲ್ಲಾ
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಾರ್ವಜನಿಕರು ಮುಂದಿರಿಸಿದ ವಿವಿಧ ಸಮಸ್ಯೆಗಳಿಗೆ, ಪ್ರಶ್ನೆಗಳಿಗೆ ಉತ್ತರಿಸಿದ ಅನಿಲ್ ಕುಮಾರ್ ಭೂಮರೆಡ್ಡಿ ಅವರು ಸೂಕ್ತ ಕ್ರಮದ ಭರವಸೆ ನೀಡಿದರು.
ಗಡಿಭಾಗದಲ್ಲಿ ಮತ್ತು ನಗರದಲ್ಲಿ ಮಾದಕ ವಸ್ತುಗಳ ಹಾವಳಿ ಇರುವ ಬಗ್ಗೆ ಇಲಾಖೆಯ ಗಮನಕ್ಕೆ ತಂದ ಸಾರ್ವಜನಿಕರು ಕಠಿಣ ಕ್ರಮಕ್ಕೆ ಒತ್ತಾಯಿಸಿದರು.ನಗರದ ಫುಟ್ಪಾತ್ ಅತಿಕ್ರಮಣ, ಅವಧಿ ಮೀರಿದ ಬ್ಯಾನರ್ಗಳ ತೆರವು, ಆಲೆಟ್ಟಿ–ಬಡ್ಡಡ್ಕ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಗಳನ್ನು ನಿಯಂತ್ರಿಸಬೇಕು, ಸಂಚಾರಿ ಪೊಲೀಸ್ ಠಾಣೆ ಸ್ಥಾಪನೆ ಹಾಗೂ ಗಡಿ ದಾಟುವ ಆಟೊರಿಕ್ಷಾಗಳಿಗೆ ದಂಡ ವಿಧಿಸುವ ಕ್ರಮದ
ಬಗ್ಗೆಯೂ ಸಾರ್ವಜನಿಕರು ಸಭೆಯ ಗಮನಕ್ಕೆ ತಂದರು.ಎಲ್ಲ ವಿಷಯಗಳನ್ನು ಪರಿಶೀಲಿಸಿ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಸಭೆಗೆ ತಿಳಿಸಿದರು.ಯಾವುದೇ ದೂರು ದಾಖಲಾದ ತಕ್ಷಣ ಏಕಪಕ್ಷೀಯ ಕ್ರಮಕ್ಕೆ ಅವಕಾಶವಿಲ್ಲ. ಎಲ್ಲರಿಗೂ ಕಾನೂನಿನಲ್ಲಿ ಸಮಾನ ಅವಕಾಶವಿದೆ, ಆದುದರಿಂದ ಸಮಗ್ರ ಪರಿಶೀಲನೆ ನಡೆಸಿದ ಬಳಿಕ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ನಿವೃತ್ತ ಪ್ರಾಂಶುಪಾಲ ದಾಮೋದರ ಗೌಡ, ಸುರೇಶ್ ಕಣೆಮರಡ್ಕ,ಪದ್ಮಯ್ಯ ಗೌಡ, ರಾಜೇಶ್, ಕೌಶಲ್, ವಿನೋದ್, ಮಾಧವ ಗೌಡ,ಸುದರ್ಶನ ಪಾತಿಕಲ್ಲು, ಚಿದಾನಂದ, ರಾಧಾಕೃಷ್ಣ ಬೈತ್ತಡ್ಕ, ರಶೀದ್ ಜಟ್ಟಿಪಳ್ಳ, ರಾಧಾಕೃಷ್ಣ ಪರಿವಾರಕಾನ, ಡಿ.ಎಂ. ಶಾರೀಕ್, ಸರಸ್ವತಿ ಬೊಳಿಯಮಜಲು ಮತ್ತಿತರರು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿ ಸಲಹೆ-ಸೂಚನೆಗಳನ್ನು ನೀಡಿದರು.
ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಎಸ್ಐ ಸಂತೋಷ್ ಕುಮಾರ್ ಬಿ.ಪಿ, ಪ್ರೊಬೆಷನರಿ ಎಸ್ಐ ಬಿ.ಜಿ. ಕೃಷ್ಣ ಸಭೆಯಲ್ಲಿ ಉಪಸ್ಥಿತರಿದ್ದರು. ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಪತ್ರಕರ್ತ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಎಸ್ಐ ಸಂತೋಷ್ ಕುಮಾರ್ ಬಿ.ಪಿ.ವಂದಿಸಿದರು.






