ಮಂಗಳೂರು:ಆಪರೇಷನ್ ಸಿಂಧೂರ್ ಕೇವಲ ಭಯೋತ್ಪಾದಕ ವಿರುದ್ದ ಕಾರ್ಯಾಚರಣೆಯಾಗಿರಲಿಲ್ಲ, ಬದಲಾಗಿ ಅದು ನವ ಭಾರತದ ಅಪ್ರತಿಮ ಶಕ್ತಿಯನ್ನು ಜಗತ್ತಿಗೆ ಸಾರಿದ ಐತಿಹಾಸಿಕ ದಿನ” ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಬಣ್ಣಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಭಯೋತ್ಪಾದಕ ನೆಲೆಗಳ ಮೇಲೆ ನಡೆಸಿದ ದಾಳಿಯ ಕುರಿತಂತೆ
ಪ್ರತಿಕ್ರಿಯಿಸಿರುವ ಸಂಸದರು, ನಮ್ಮ ಸೇನೆಯ ವ್ಯವಸ್ಥಿತ ಹಾಗೂ ಕೆಚ್ಚೆದೆಯ ಕಾರ್ಯಾಚರಣೆಯ ಮೂಲಕ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಟ್ಟಿದೆ’ ಎಂದು ಹೇಳಿದ್ದಾರೆ. ಹೊಸ ಭಾರತವನ್ನು ಯಾರಾದರೂ ಕೆಣಕಿದರೆ, ನಮ್ಮ ಉತ್ತರವು ಇತಿಹಾಸವನ್ನೇ ನಡುಗಿಸುವಂತಹ ಶಕ್ತಿಯನ್ನು ಹೊಂದಿರುತ್ತದೆ. ಕೇವಲ 25 ನಿಮಿಷಗಳಲ್ಲಿ ನಡೆದ ಪರಿಣಾಮಕಾರಿ ಕಾರ್ಯಾಚರಣೆಯಲ್ಲಿ ನಮ್ಮ ಸೇನೆಯು 9 ಪ್ರದೇಶಗಳಲ್ಲಿನ 21 ಉಗ್ರರ ಅಡಗುತಾಣಗಲನ್ನು ಕ್ಷಿಪಣಿ ದಾಳಿ ಮಾಡಿ ನಾಶ ಮಾಡಿರುವುದು ಬದಲಾದ ಭಾರತ ನೀಡಿದ ಪ್ರತಿಕ್ರಿಯೆಯಾಗಿದೆ ಎಂದು ಹೇಳಿದರು. ನಾಗರಿಕರಿಗೆ ಹಾನಿಯಾಗದಂತೆ ನಮ್ಮ ಸೇನೆಯ ಜವಾಬ್ದಾರಿಯುತ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆಯು ನಿಜಕ್ಕೂ ಶ್ಲಾಘನೀಯ. ಭಯೋತ್ಪಾದಕ ಹಾಗೂ ಪಾಕಿಸ್ತಾನದ ಕುತಂತ್ರದ ವಿರುದ್ಧ ಪ್ರತೀಕಾರ ತೀರಿಸಬೇಕೆಂಬ ಭಾರತೀಯರ ಅಪೇಕ್ಷೆ ಈಡೇರಿದೆ. ಉಗ್ರರು ಹಾಗೂ ಅವರ ಸಹಚರರು ಎಲ್ಲೇ ಅಡಗಿ ಕುಳಿತರೂ, ಅವರೆಲ್ಲರನ್ನೂ ನುಗ್ಗಿ ಹೊಡೆದು ಸಂಹಾರ ಮಾಡುವ ಅತ್ಯಂತ ಬಲಿಷ್ಠ ರಾಷ್ಟ್ರ ಎಂಬುದನ್ನು ನಮ್ಮ ಹೆಮ್ಮೆಯ ಭಾರತ ತೋರಿಸಿ ಕೊಟ್ಟಿದೆ ಎಂದು ಹೇಳಿದ್ದಾರೆ.