ಸುಳ್ಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮೇ.17ರಂದು ಸುಳ್ಯಕ್ಕೆ ಆಗಮಿಸಲಿದ್ದಾರೆ.ಸುಳ್ಯ ಜಯನಗರದ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ ಶ್ರೀ ಗುಳಿಗ ದೈವ ಹಾಗೂ ಕೊರಗಜ್ಜ ದೈವಸ್ಥಾನದಲ್ಲಿ ನಡೆಯುವ ವಿಶೇಷ ಹರಕೆಯ ಶ್ರೀ ಕೊರಗಜ್ಜ ದೈವದ ನೇಮ ಮತ್ತು ಪರಿವಾರ ದೈವಗಳ ತಂಬಿಲ ಸೇವೆಯಲ್ಲಿ ಬಿ.ವೈ. ವಿಜಯೇಂದ್ರರು ಭಾಗವಹಿಸಲಿದ್ದಾರೆ ಎಂದು
ದೈವಸ್ಥಾನದ ಸಂಚಾಲಕರಾಗಿರುವ ಜಿ.ಜಗನ್ನಾಥ ಜಯನಗರ ತಿಳಿಸಿದ್ದಾರೆ. ನರೇಂದ್ರ ಮೋದಿಯವರು 3ನೇ ಬಾರಿ ಪ್ರಧಾನಿಗಳಾಗಿ ಸರಕಾರ ನಡೆಸಬೇಕೆಂದು ಭಾರತೀಯ ಜನತಾ ಪಾರ್ಟಿ ಜಯನಗರ ಬೂತ್ ಸಮಿತಿಯವರು ಸಾನಿಧ್ಯದಲ್ಲಿ ಸಂಕಲ್ಪ ಮಾಡಿಕೊಂಡ ವಿಶೇಷ ಹರಕೆಯ ಶ್ರೀ ಕೊರಗಜ್ಜ ದೈವದ ನೇಮ ಮತ್ತು ಪರಿವಾರ ದೈವಗಳಿಗೆ ತಂಬಿಲ ಸೇವೆ ಮೇ.17ರಂದು ನಡೆಯಲಿದೆ.
ಈ ದೈವ ಕಾರ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು, ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ನೇಮೋತ್ಸವ ಬಳಿಕ ಶ್ರೀ ದೈವದ ಕರಿಗಂಧ ಪ್ರಸಾದವನ್ನು ಸಂಸದರಾದ ಕ್ಯಾ. ಬ್ರಿಜೇಶ್ ಚೌಟರ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ತಲುಪಿಸಲಾಗುವುದು ಎಂದು ಜಗನ್ನಾಥ ಜಯನಗರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.