ಬೆಂಗಳೂರು: ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ 3 ರೂಪಾಯಿಗಳನ್ನು ಹೆಚ್ಚಳ ಮಾಡಲು ರಾಜ್ಯ ಸರಕಾರ ಸಮ್ಮತಿಸಿದ್ದು, ಪರಿಷ್ಕೃತ ಹಾಲಿನ ದರ ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ಶುಕ್ರವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಹಾಲು ಉತ್ಪಾದಕ
ಮಹಾ ಮಂಡಳ(ಕೆಎಂಎಫ್) ಹಾಗೂ ಎಲ್ಲ ಹಾಲು ಒಕ್ಕೂಟದ ಅಧ್ಯಕ್ಷರುಗಳ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿ ಲೀಟರ್ ಹಾಲಿಗೆ 5 ರೂ.ಗಳನ್ನು ಹೆಚ್ಚಳ ಮಾಡಲು ಹಾಲು ಒಕ್ಕೂಟ ಪ್ರಸ್ತಾವ ಸಲ್ಲಿಸಿದ್ದವು. ಅಂತಿಮವಾಗಿ ಪ್ರತಿ ಲೀಟರ್ಗೆ 3 ರೂ.ಹೆಚ್ಚಳ ಮಾಡಲು ಸರಕಾರ ಒಪ್ಪಿಗೆ ನೀಡಿದ್ದು, ಆ ಮೊತ್ತವನ್ನು ಹಾಲು ಒಕ್ಕೂಟಗಳು ನೇರವಾಗಿಯೇ ಹಾಲು ಉತ್ಪಾದಕ ರೈತರಿಗೆ ಪಾವತಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಪಶುಸಂಗೋಪನೆ ಸಚಿವ ವೆಂಕಟೇಶ್, ಸಹಕಾರ ಸಚಿವ ರಾಜಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಝೀರ್ ಅಹ್ಮದ್, ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್, ಕೆಎಂಎಫ್ ನಿರ್ದೇಶಕ ಹೆಚ್.ಡಿ.ರೇವಣ್ಣ ಸೇರಿ ಹಲವು ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.