ಸುಳ್ಯ:ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಸುಳ್ಯ, ಪಂಜ ಹೋಬಳಿ ಘಟಕ, ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನ.1ರಿಂದ 7ರ ತನಕ ತಾಲೂಕಿನ ವಿವಿಧ ಕಡೆಗಳಲ್ಲಿ ನಡೆಯಲಿದೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ 2016ರಿಂದ
ಆರಂಭಗೊಂಡ ಸಾಹಿತ್ಯ ಸಂಭ್ರಮ ಈ ವರ್ಷ ದಶಮಾನೋತ್ಸವ ಆಚರಿಸುತ್ತಿದ್ದು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ತಿಳಿಸಿದ್ದಾರೆ.
ನ.1ರಂದು ಪೂ.9.30 ರಿಂದ ಸಾಹಿತ್ಯ ಸಂಭ್ರಮದ ಉದ್ಘಾಟನೆ ಮತ್ತು ಪಂಜ ಹೋಬಳಿ ಘಟಕ ಮಕ್ಕಳ ಸಾಹಿತ್ಯ ಸಮ್ಮೇಳನ ದೇವಚಳ್ಳ ದ.ಕ.ಜಿ ಪ ಹಿ.ಪ್ರಾ ಶಾಲೆಯಲ್ಲಿ ನಡೆಯಲಿದೆ.ಸಮ್ಮೇಳನದ ಅಧ್ಯಕ್ಷತೆಯನ್ನು ಗುತ್ತಿಗಾರು ಸ.ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಮೇಘ ಹೆಚ್. ಕೆ. ವಹಿಸುವರು.ಸಮ್ಮೇಳನ ಉದ್ಘಾಟನೆಯನ್ನು ದ.ಕ.ಜಿ.ಪಂ.ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ನೆರವೇರಿಸುವರು. ಬಾಳಿಲ ವಿದ್ಯಾಬೋಧಿನೀ ಪ್ರೌಢ ಶಾಲೆಯ ದೀಕ್ಷಾ ಪಿ ದಿಕ್ಸೂಚಿ ಭಾಷಣ ಮಾಡುವರು.ಬಳಿಕ
ವಿದ್ಯಾರ್ಥಿ ಕವಿಗೋಷ್ಠಿ, ವಿದ್ಯಾರ್ಥಿ ಚರ್ಚಾಗೋಷ್ಠಿ ನಡೆಯಲಿದೆ.ಸಮಾರೋಪ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸುವರು. ಪತ್ರಕರ್ತ ಹರೀಶ ಕೇರ ಸಮಾರೋಪ ಭಾಷಣ ಮಾಡುವರು.
ನ.2ರಂದು ಪೂ.9.30ರಿಂದ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಡ ಇಲ್ಲಿ ಪರಿಸರ ಸಾಹಿತ್ಯ ಸಂಭ್ರಮ ನಡೆಯಲಿದೆ.ಸಾಹಿತಿ ಹಾಗು ವಿಶ್ರಾಂತ ಪ್ರಾಧ್ಯಾಪಕರಾದ ಡಾ.ನರೇಂದ್ರ ರೈ ದೇರ್ಲ ಉಪನ್ಯಾಸ ನೀಡುವರು. ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸುವರು.
ನ.3ರಂದು ಪೂ.10.30ಕ್ಕೆ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ ನುಡಿ ಹಬ್ಬ ಸಂಭ್ರಮ ನಡೆಯಲಿದೆ.ಲೇಖಕಿ ವಿಮಲಾರುಣ ಪಡ್ಡಂಬೈಲು ಉಪನ್ಯಾಸ ನೀಡುವರು.ಸಾಹಿತಿ ಹಾಗು ಪ್ರಾಧ್ಯಾಪಕಿ ಡಾ.ಅನುರಾಧಾ ಕುರುಂಜಿ ಅವರನ್ನು ಸನ್ಮಾನಿಸಲಾಗುವುದು.
ಬಳಿಕ ವಿದ್ಯಾರ್ಥಿಗಳಿಂದ ಗೀತಗಾಯನ ಕಾರ್ಯಕ್ರಮ ನಡೆಯಲಿದೆ.
ನ.3ರಂದು ಅ.2ರಿಂದ ಅರಂತೋಡು ನೆಹರು ಮೆಮೊರಿಯಲ್ ಪ.ಪೂ. ವಿದ್ಯಾಲಯದಲ್ಲಿ ಅರೆಭಾಷೆ ಸಾಹಿತ್ಯ ಸಂಭ್ರಮ- ಸ್ಪರ್ಧೆಗಳು ನಡೆಯಲಿದೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸುವರು.ಕಸಾಪ ಅಧ್ಯಕ್ಷ
ಚಂದ್ರಶೇಖರ ಪೇರಾಲು ‘ಅರೆಭಾಷೆಯಲ್ಲಿ ಸಾಹಿತ್ಯ ರಚನೆ ಸಾಧ್ಯತೆ’ ಕುರಿತು ಉಪನ್ಯಾಸ ನೀಡುವರು.ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ
ಕಿಶೋರ್ಕುಮಾರ್ ಕಿರ್ಲಾಯ ಅವರನ್ನು ಸನ್ಮಾನಿಸಲಾಗುವುದು.
ನ.4ರಂದು ಅ.2ರಿಂದ ಬಾಳಿಲವಿದ್ಯಾಬೋಧಿನೀ ಪ್ರೌಢ ಶಾಲೆಯಲ್ಲಿ
ಪುರಾಣ ಸಾಹಿತ್ಯ ಸಂಭ್ರಮ-ಭರತನ ಭ್ರಾತೃ ಪ್ರೇಮ ಗಾಯನ ಮತ್ತು ವ್ಯಾಖ್ಯಾನ ನಡೆಯಲಿದೆ. ಯಕ್ಷಗಾನ ಅರ್ಥದಾರಿ ವೆಂಕಟರಾಮ ಭಟ್ ವ್ಯಾಖ್ಯಾನ ಮತ್ತು ಭಾಗವತರಾದ ರಚನಾ ಚಿದ್ದಲ್ಲು ಗಾಯನ ನಡೆಸುವರು. ಮಳೆ ದಾಖಲೆಗಾರರಾದ ಪಿ.ಜಿ.ಎಸ್.ಎನ್. ಪ್ರಸಾದ್ ಅವರನ್ನು ಸನ್ಮಾನಿಸಲಾಗುವುದು.
ನ.5ರಂದು ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ತುಳು ಸಾಹಿತ್ಯ ಸಂಭ್ರಮ-ಗಾಯನ ಕಾರ್ಯಕ್ರಮ ನಡೆಯಲಿದೆ. ಉಪಪ್ರಾಂಶುಪಾಲರಾದ ಉಮಾ ಕುಮಾರಿ ಅವರನ್ನು ಸನ್ಮಾನಿಸಲಾಗುವುದು.
ನ.6 ರಂದು ಸಂಜೆ 6 ರಿಂದ ದೀಪಾವಳಿ ಕವಿಗೋಷ್ಠಿ, ಹರಟೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ವಿಷ್ಣು ದೋಳ ಗೂನಡ್ಕ ಇಲ್ಲಿ ನಡೆಯಲಿದೆ. ಗೌರಮ್ಮ ಡಿ.ವಿ, ವೀರಪ್ಪ ಗೌಡ ದೋಳ ಅವರನ್ನು ಸನ್ಮಾನಿಸಲಾಗುವುದು.
ನ.7ರಂದು ಸಂಜೆ 6ರಿಂದ ಸಾಹಿತ್ಯ ಸಂಭ್ರಮ ಸಮಾರೋಪ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮ ‘ಅಕ್ಷರ’ ಹೊಸಗದ್ದೆ ಹಳೆಗೇಟು ಇಲ್ಲಿ ನಡೆಯಲಿದೆ. ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸುವರು.ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಎಒಎಲ್ಇ ಕಾರ್ಯದರ್ಶಿ ಕೆ.ವಿ. ಹೇಮನಾಥ ಭಾಗವಹಿಸಲಿದ್ದಾರೆ.ಡಾ.ಲೀಲಾಧರ್ ಡಿ.ವಿ, ಪ್ರಕಾಶ್ ಮೂಡಿತ್ತಾಯ, ಲೋಕೇಶ್ ಊರುಬೈಲು, ಅಭಿಷೇಕ್ ಎಂ ಇವರನ್ನು ಸನ್ಮಾನಿಸಲಾಗುವುದು ಎಂದು ಕಸಾಪ ಪ್ರಕಟಣೆ ತಿಳಿಸಿದೆ.









