ಸುಳ್ಯ:ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಉಂಟಾಗಿರುವ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಕೆಪಿಸಿಸಿ ತಂಡ ಸುಳ್ಯದಲ್ಲಿ ಸಮೀಕ್ಷೆ ನಡೆಸಿ ಕಾರ್ಯಕರ್ತರು ಹಾಗೂ ಮುಖಂಡರಿಂದ ಅಭಿಪ್ರಾಯ ಸಂಗ್ರಹ ಮಾಡಿ ಸಮೀಕ್ಷೆ ನಡೆಸಲಿದ್ದಾರೆ. ಕಾಂಗ್ರೆಸ್ನ ಹಿರಿಯ ಮುಖಂಡ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷರು ಆದೇಶ ಮಾಡಿದ್ದರು. ಆದರೆ ಈ ನೇಮಕಾತಿಗೆ
ಅಸಮಾಧಾನ ವ್ಯಕ್ತಪಡಿಸಿ ಸುಳ್ಯದ ಕೆಲವು ಮುಖಂಡರು ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡಿದ ಕಾರಣ ಬ್ಲಾಕ್ ಅಧ್ಯಕ್ಷರ ನೇಮಕಾತಿಗೆ ತಾತ್ಕಾಲಿಕ ತಡೆ ಉಂಟಾಗಿತ್ತು. ರಾಧಾಕೃಷ್ಣ ಬೊಳ್ಳೂರು ಪದಗ್ರಹಣಕ್ಕೆ ಸಿದ್ಧತೆ ಮಾಡಿಕೊಂಡಿದ್ದರೂ ಅದು ರದ್ದಾಗಿತ್ತು. ಬಳಿಕ ಕೆಪಿಸಿಸಿ ಉಪಾಧ್ಯಕ್ಷರಾದ ಸುದರ್ಶನ್ ಹಾಗೂ ನಾರಾಯಣ ಸ್ವಾಮಿ ನೇತೃತ್ವದ ಕೆಪಿಸಿಸಿ ಸಮಿತಿ ಮಂಗಳೂರಿನಲ್ಲಿ ಸಭೆ ನಡೆಸಿ ಕಾಂಗ್ರೆಸ್ ಮುಖಂಡರಿಂದ ಮತ್ತು ಕಾರ್ಯಕರ್ತರಿಂದ ಅಭಿಪ್ರಾಯ ಪಡೆಯಲಾಗಿತ್ತು. ಮುಖಂಡರು, ಕಾರ್ಯಕರ್ತರು ಸೇರಿ ಸುಳ್ಯದಿಂದ ಸುಮಾರು 200ಕ್ಕೂ ಅಧಿಕ ಮಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕೆಪಿಸಿಸಿ ಸಮಿತಿ ವರದಿ ಸಲ್ಲಿಸಿದ್ದು ಕೆಪಿಸಿಸಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿಲ್ಲ. ಸುಳ್ಯದಲ್ಲಿ ಮತ್ತೊಮ್ಮೆ ಕೆಪಿಸಿಸಿ ಸಮಿತಿ ಆಗಮಿಸಿ ಕಾರ್ಯಕರ್ತರಿಂದ ಮುಖಂಡರಿಂದ ಅಭಿಪ್ರಾಯ ಕ್ರೂಢೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸುಳ್ಯ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರ ನೇಮಕಾತಿ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರಾಧಾಕೃಷ್ಣ ಬೊಳ್ಳೂರು ‘ಕೆಪಿಸಿಸಿ ವೀಕ್ಷಕರಾದ ಜಿ.ಎ.ಬಾವ ಅವರು ಅಭಿಪ್ರಾಯ ಸಂಗ್ರಹಿಸಿ ಸಲ್ಲಸಿದ ವರದಿಯ ಆಧಾರದಲ್ಲಿ ಪಕ್ಷದ ನೀತಿ ನಿಯಮದಂತೆ ನನ್ನನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಿ ಕೆಪಿಸಿಸಿ ನೇಮಕ ಮಾಡಿ ಆದೇಶ ಆಗಿದೆ. ಬಳಿಕ ತಾತ್ಕಾಲಿಕ ತಡೆ ಉಂಟಾಗಿದ್ದು ಮಂಗಳೂರಿನಲ್ಲಿ ಕೆಪಿಸಿಸಿ ವೀಕ್ಷಕರು ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ವರದಿ ಸಲ್ಲಿಸಿದ್ದಾರೆ. ಇದೀಗ ಸುಳ್ಯದಲ್ಲಿ ಮತ್ತೊಮ್ಮೆ ಕೆಪಿಸಿಸಿ ತಂಡ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದು ಹೇಳಿದರು. ಬ್ಲಾಕ್ ಅಧ್ಯಕ್ಷರಾಗಿ ಮುಂದುವರಿಸುವ ವಿಶ್ವಾಸ ಇದೆ, ಈಗ ಅಸ್ಟೇ ಹೇಳಬಲ್ಲೆ ಹೆಚ್ಚಿನ ವಿಚಾರಗಳ ಬಗ್ಗೆ ಈಗ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ರಾಧಾಕೃಷ್ಣ ಬೊಳ್ಳೂರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ರಾಜೀವ್ ಗಾಂಧೀ ಪಂಚಾಯತ್ ರಾಜ್ ಸಂಘಟನೆಯ ಸುಳ್ಯ ತಾಲೂಕು ಅಧ್ಯಕ್ಷ ಜಯಪ್ರಕಾಶ್ ನೆಕ್ರಪ್ಪಾಡಿ ಉಪಸ್ಥಿತರಿದ್ದರು.