ಸುಳ್ಯ:ಕೃಷಿಯು ಸುಸ್ಥಿರವಾಗಿ ಮತ್ತು ಲಾಭದಾಯಕವಾಗಿಸಲು ಕೃಷಿಕರು ಒಂದೇ ಕೃಷಿಯನ್ನು ಅವಲಂಬಿಸದೆ ಮಿಶ್ರ ಹಾಗೂ ಪೂರಕ ಕೃಷಿಗೆ ಒತ್ತು ನೀಡಬೇಕು ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಇದರ ವತಿಯಿಂದ ಸುಳ್ಯದ ಬಂಗ್ಲೆಗುಡ್ಡೆಯಲ್ಲಿ ನಿರ್ಮಿಸಿದ
ನೂತನ ಕಟ್ಟಡ ಮತ್ತು ಆಧುನಿಕ ಸಂಸ್ಕರಣಾ ಘಟಕದ ಉದ್ಘಾಟನೆಯನ್ನು ನೆರವೇಸಿ ಸುಳ್ಯದ
ಶಾಸ್ತ್ರೀ ವೃತ್ತದಲ್ಲಿರುವ ಅಮೃತ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ 50 ಕೋಟಿ ಜನರು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದ ಜಿಡಿಪಿಗೆ ಶೇ.30 ರಷ್ಟನ್ನು ನೀಡುವ ಕೃಷಿ ಕ್ಷೇತ್ರ ಅತೀ ಹೆಚ್ಚು ಉದ್ಯೋಗವನ್ನೂ ನೀಡುತಿದೆ.26 ಕೋಟಿ ಜನರು ತೊಡಗಿಸಿ ಕೊಂಡಿರುವ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕಾ ಕ್ಷೇತ್ರ ಜಿಡಿಪಿಗೆ ಶೇ.18ನ್ನು ನೀಡುತಿದೆ.
ಕೃಷಿಯಲ್ಲಿ ಗುಣಮಟ್ಟದ ಉತ್ಪಾದನೆಗೆ ಒತ್ತು ನೀಡಬೇಕು.ಆಗ ಉತ್ತಮ

ಮಾರುಕಟ್ಟೆ ಮತ್ತು ದರ ದೊರೆಯಲು ಸಾಧ್ಯ. ನಾವು ಉತ್ಪಾದಿಸುವ ಆಹಾರ ವಸ್ತುಗಳು ವಿದೇಶಕ್ಕೆ ರಫ್ತಾಗುವ ಗುಣಮಟ್ಟದ್ದಾಗಿರಬೇಕು ಎಂದ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಆಹಾರ ಪರೀಕ್ಷಾ ಪ್ರಯೋಗಾಲಯ ಆಗಬೇಕು. ಇದರಿಂದ ಆಹಾರ ಉತ್ಪಾದನೆಯ ಗುಣಮಟ್ಟ ಹೆಚ್ಚಾಗಲು ಮತ್ತು ಆರೋಗ್ಯ ಸಂರಕ್ಷಣೆಗೆ ಸಹಾಯಕ ಎಂದು ಅವರು ಹೇಳಿದರು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪೂರಕವಾಗಿ ಕೃಷಿ ಕ್ಷೇತ್ರದಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಲು ಆದ್ಯತೆ ನೀಡಬೇಕು. ಜೇನು ವ್ಯವಸಾಯ ಕ್ಷೇತ್ರದಲ್ಲಿ ವಿಫುಲ ಅವಕಾಶಗಳು ಇವೆ, ಆದುದರಿಂದ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಜೇನು ಉತ್ಪಾದಿಸಲು ಒತ್ತು ನೀಡಿ ಎಂದು ಹೇಳಿದರು. ಪ್ರಮುಖ ಬೆಳೆಯ ಜೊತೆಗೆ ಜೇನು ಕೃಷಿಯಂತೆ ಇತರ ಹಲವು ಪೂರಕ ಹಾಗೂ ಮಿಶ್ರ ಬೆಳೆಯನ್ನು ಬೆಳೆಸಿ ಎಂದ ಅವರು ಮಿಶ್ರ ಕೃಷಿಯಿಂದ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದರು.

ನೂತನ ಜೇನು ಚಾಕಲೇಟ್ ಲೋಕಾರ್ಪಣೆ ಮಾಡಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ ‘ ಜೇನು ಕೃಷಿ ಕ್ಷೇತ್ರಕ್ಕೆ ಆಧುನಿಕ ರೂಪ ನೀಡಿ ಜೇನು ಕೃಷಿಯನ್ನು ಇನ್ನಷ್ಟು ಲಾಭದಾಯಕವಾಗಿ ಮಾಡುವ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಶುದ್ಧ ಜೇನು ತುಪ್ಪ ಆರೋಗ್ಯಕ್ಕೆ ಉತ್ತಮ. ಆದುದರಿಂದ ಗುಣಮಟ್ಟದ ಜೇನು ಉತ್ಪಾದನೆಗೆ ಪ್ರಯತ್ನ ನಡೆಸಬೇಕು ಎಂದು ಹೇಳಿದರು. ಜೇನು ಕೃಷಿಗೆ ಬೆಳೆ ಸಾಲ, ಬೆಳೆ ವಿಮೆ ನೀಡುವ ಬಗ್ಗೆ ಸರಕಾರದ ಹಂತದಲ್ಲಿ ನಿರ್ಧಾರ ಆಗಬೇಕು. ಆ ರೀತಿಯ ಪ್ರಯತ್ನಕ್ಕೆ ತಮ್ಮ ಸಹಕಾರ ಇದೆ ಎಂದು ಅವರು ಹೇಳಿದರು.

ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಇದರ ಅಧ್ಯಕ್ಷ ಸಹಕಾರ ರತ್ನ ಚಂದ್ರ ಕೋಲ್ಚಾರು ಅಧ್ಯಕ್ಷತೆ ವಹಿಸಿ ಮಾತನಾಡಿ ‘ಜೇನು ವ್ಯವಸಾಯಗಾರರ ಸಹಕಾರಿ ಸಂಘವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಎಲ್ಲಾ ರೀತಿಯ ಪ್ರಯತ್ನವನ್ನು ಆಡಳಿತ ಮಂಡಳಿ ನಡೆಸುತಿದೆ. ಕೃಷಿ ಉತ್ಪನ್ನಗಳಿಗೆ ಉತ್ತಮ ದರ ಸಿಗಬೇಕು, ಉದ್ಯೋಗಾವಕಾಶ ಸೃಷ್ಠಿಯಾಗಬೇಕು ಎಂಬ ನಿಟ್ಟಿನಲ್ಲಿ ಹೊಸ ಪ್ರಯತ್ನವನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ ನಾಮಫಲಕ ಅನಾವರಣ ಮಾಡಿದರು.ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ,ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ಭಾಗವಹಿಸಿದ್ದರು.
ಸಂಘದ ಉಪಾಧ್ಯಕ್ಷ ರಾಜಾರಾಮ ಶೆಟ್ಟಿ, ನಿರ್ದೇಶಕರಾದ ಜಿ.ಪಿ.ಶ್ಯಾಮ ಭಟ್ಟ, ಡಿ.ತನಿಯಪ್ಪ, ಎಚ್.ಸುಂದರ ಗೌಡ, ಇಂದಿರಾ.ಕೆ, ಪಾಂಡುರಂಗ ಹೆಗ್ಡೆ, ಹರೀಶ್ ಕೋಡ್ಲ, ಪುರುಷೋತ್ತಮ ಭಟ್ ಎಂ, ಶಿವಾನಂದ, ಮನಮೋಹನ, ಪುಟ್ಟಣ್ಣ ಗೌಡ ಕೆ,ಗೋವಿಂದ ಭಟ್ ಪಿ, ಶಂಕರ ಪೆರಾಜೆ, ಸರಸ್ವತಿ ವೈ.ಪಿ, ಸುಶೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೇನು ಚಾಕಲೇಟ್ ಉತ್ಪಾದನೆ ಮಾಡಯತ್ತಿರುವ ಪ್ರಶಾಂತ್ ದಂಪತಿಗಳನ್ನು ಸನ್ಮಾನಿಸಲಾಯಿತು.

ಸಂಘದ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ.ಎಂ.ಎಚ್, ಮೆಸ್ಕಾಂ ಸಹಾಯಕ ಇಂಜಿನಿಯರ್ ಸುಪ್ರೀತ್ ಹಾಗೂ ಸಹಕರಿಸಿದವರಿಗೆ ಗೌರವಾರ್ಪಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ವ್ಯವಸ್ಥಾಪಕ ನಿರ್ದೇಶಕ ತಿಮ್ಮಯ್ಯ ಪಿ. ಅವರನ್ನ ಶಾಲು,ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸಚಿವೆ ಶೋಭಾ ಕರಂದ್ಲಾಜೆಯವರು ಸನ್ಮಾನಿಸಿದರು.
ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಇದರ ಅಧ್ಯಕ್ಷ ಸಹಕಾರ ರತ್ನ ಚಂದ್ರ ಕೋಲ್ಚಾರು ಸ್ವಾಗತಿಸಿ, ವ್ಯವಸ್ಥಾಪಕ ನಿರ್ದೇಶಕ ತಿಮ್ಮಯ್ಯ ಪಿ.ವಂದಿಸಿದರು.
ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು. ಕೆ.ಟಿ.ವಿಶ್ವನಾಥ, ಸುಪ್ರೀತ್ ಮೋಂಟಡ್ಕ ಮತ್ತಿತರರು ಸಹಕರಿಸಿದರು.

ವಿಭಿನ್ನ ಉದ್ಘಾಟನೆ:
ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ನೂತನ ಕಟ್ಟಡ ಹಾಗೂ ಸಂಸ್ಕರಣಾ ಘಟಕದ ಉದ್ಘಾಟನೆಯನ್ನು ವಿಭಿನ್ನವಾಗಿ ಮಾಡಲಾಯಿತು. ರಿಮೋಟ್ ಮೂಲಕ ಬಲೂನ್ ಹಾರಿಸುವ ಮೂಲಕ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು.
ಪ್ರಾರ್ಥನೆ ಹಾಡುತ್ತಿದ್ದಂತೆ ಅತಿಥಿಗಳು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಾಕಲೇಟ್ ಲೋಕಾರ್ಪಣಾ ಕಾರ್ಯಕ್ರಮವೂ ಗಮನ ಸೆಳೆಯಿತು.