ಸುಳ್ಯ:ಮಕ್ಕಳ ಬೌದ್ದಿಕ ಬೆಳವಣಿಗೆಗೆ ಮತ್ತು ಮಕ್ಕಳಲ್ಲಿರುವ ಪ್ರತಿಭೆಗೆ ಒರಗೆ ಹಚ್ಚಲು ರಂಗಮಯೂರಿ ಕಲಾಶಾಲೆ ವತಿಯಿಂದ ನಡೆಸುವ ಬಣ್ಣದಂತಹಾ ಕ್ರಿಯಾಶೀಲ ಬೇಸಿಗೆ ಶಿಬಿರಗಳು ಸಹಕಾರಿ ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಹೇಳಿದ್ದಾರೆ. ಸುಳ್ಯದ ರಂಗ ಮಯೂರಿ ಕಲಾ ಶಾಲೆಯ ವತಿಯಿಂದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ಆರಂಭಗೊಂಡ
‘ಬಣ್ಣ’ ಮಕ್ಕಳ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಎ.12ರಿಂದ 20ರ ತನಕ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ನಡೆಯುವ ಅಭಿನಯ ಪ್ರಧಾನ ಮಕ್ಕಳ ನಗುವಿನ ಶಿಬಿರವನ್ನು
ಹಿರಿಯ ಉದ್ಯಮಿಗಳಾದ ಕೃಷ್ಣ ಕಾಮತ್ ದೀಪ ಬೆಳಗಿಸಿ, ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಾಯರ್ತೋಡಿ ಶ್ರಿ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ

ಜತ್ತಪ್ಪ ರೈ, ವಿಠಲ ಬಿ.ಕೆ, ನೆಹರೂ ಸ್ಮಾರಕ ಮಹಾವಿದ್ಯಾಲಯದ ಪ್ರಾಂಶುಪಾಲ ಎಂ.ಎಂ.ರುದ್ರಕುಮಾರ್, ಬ್ಯಾಂಕ್ ಆಫ್ ಬರೋಡ ಸುಳ್ಯ ಶಾಖೆಯ ವ್ಯವಸ್ಥಾಪಕರಾದ ವಿಜಯ್, ರಂಗ ಕಲಾವಿದೆ ಪಲ್ಲವಿ ಕೊಡಗು ಭಾಗವಹಿಸಿದ್ದರು. ದೃತಿ ದೀಟಿಗೆ ಸ್ವಾಗತಿಸಿ, ಭವಾನಿಶಂಕರ ಅಡ್ತಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ವಂದಿಸಿದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
ರಂಗಪ್ರಧಾನ ಶಿಬಿರ:
ಶಿಬಿರದಲ್ಲಿ ಈ ಬಾರಿ ಹೆಸರಾಂತ ರಂಗಸಂಸ್ಥೆಗಳಾದ ನೀನಾಸಂ, ರಂಗಾಯಣ, ರಂಗ ಅಧ್ಯಯನ ಕೇಂದ್ರ, ಶಿವಸಂಚಾರದ ನಾಟಕ ನಿರ್ದೇಶಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ.
ಅಭಿನಯ ಪ್ರಧಾನ ರಂಗ ತರಬೇತಿಯೊಂದಿಗೆ ನಾಟಕ ರೂಪಕಗಳ ಹಬ್ಬದ ಜೊತೆ, ಕನ್ನಡ ,ಅರೆಭಾಷೆ ,ತುಳು, ಹಿಂದಿ, ಇಂಗ್ಲೀಷ್ ಭಾಷಾ ವೈವಿಧ್ಯ ನಾಟಕಗಳೊಂದಿಗೆ, ನವರಸಗಳ ಅಭಿನಯ ಕಾರ್ಯಾಗಾರವೂ ನಡೆಯಲಿದೆ. ಭಾಷಾ ಶುಧ್ದಿ, ಸ್ಪಷ್ಟ ಉಚ್ಚಾರಣೆ, ರಂಗ ಚಲನೆ, ರಂಗ ಸಂಗೀತ, ರಂಗ ಪರಿಕರ ತಯಾರಿ, ರಂಗ ಪ್ರಸಾಧನ ಕಾರ್ಯಾಗಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಬಹುಭಾಷಾ ನಾಟಕಗಳ ಕಲಿಕೆ ಮತ್ತು ಅಭಿನಯ ಕಾರ್ಯಾಗಾರ ಹಾಗೂ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು. ಕನ್ನಡ ತುಳು, ಅರೆಭಾಷೆ, ಇಂಗ್ಲೀಷ್, ಹಿಂದಿ ನಾಟಕಗಳ ಸಂಗಮ, ಭಾಷಾ ಪರಿಚಯ ಶಿಬಿರದ ವಿಶೇಷತೆಯಾಗಿದೆ ಎಂದು ರಂಗಮಯೂರಿ ಕಲಾಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ತಿಳಿಸಿದ್ದಾರೆ.