*ಗಂಗಾಧರ ಕಲ್ಲಪಳ್ಳಿ.
ಚಿತ್ರ:ಕುಮಾರ್ ಕಲ್ಲಪಳ್ಳಿ.
ಸುಳ್ಯ:ಐಶ್ವರ್ಯ,ಸಮೃದ್ಧಿ ಸಂಭ್ರಮದ ಸಂಕೇತವಾಗಿ ಮನೆಗಳ ಮುಂದೆ ನೆಟ್ಟ ಅಲಂಕೃತಗೊಂಡ ಬಲಿಯೇಂದ್ರವು ತುಳು ನಾಡಿನ ದೀಪಾವಳಿ ಹಬ್ಬದ ಪ್ರಮುಖ ಆಕರ್ಷಣೆ. ರಂಗು ರಂಗಾಗಿ ಶೃಂಗಾರಗೊಂಡ ಬಲಿಯೇಂದ್ರನ ಕಣ್ತುಂಬಿ ಕೊಳ್ಳುವುದೇ ಇನ್ನಿಲ್ಲದ ಆನಂದ. ದೀಪಾವಳಿ ಆಚರಣೆಯ ಅಂಗವಾಗಿ ತುಳುನಾಡಿನ ಮನೆಗಳ ಮುಂದೆ ಬಲಿಯೇಂದ್ರ ಪೂಜಿಸುವ ಸಂಪ್ರದಾಯ ಇಂದಿಗೂ ಅತ್ಯಂತ ಶಾಸ್ತ್ರೋಕ್ತವಾಗಿ ಮತ್ತು
ಸಂಭ್ರಮದಿಂದ ನಡೆಯುತ್ತದೆ. ದೀಪಾವಳಿಯ ಸಂದರ್ಭದಲ್ಲಿ

ಮೂರು ದಿನಗಳ ಕಾಲ ನಡೆಯುವ ಬಲಿಯೇಂದ್ರ ಉತ್ಸವಕ್ಕೆ ಹಾಲೆ ಮರದ ಕಂಬವನ್ನು ನೆಡಲಾಗುತ್ತದೆ. ಕಾಡಿನಿಂದ ಮರವನ್ನು ತಂದು ಮನೆ ಮುಂದೆ ನೆಡಲಾಗುತ್ತದೆ. ಮನೆ ಮಂದಿಯೆಲ್ಲಾ ಸೇರಿ ಬಲಿಯೇಂದ್ರ ಮರವನ್ನು ಶೃಂಗರಿಸುವುದೇ ಹಬ್ಬದ ವಾತಾವರಣವನ್ನು ಉಂಟು ಮಾಡುತ್ತದೆ. ಪ್ರತಿ ಮನೆಯವರೂ ಬಲಿಯೇಂದ್ರವನ್ನೂ ಆಕರ್ಷಕವಾಗಿ ಅಲಂಕರಿಸಲಾಗುತ್ತದೆ. ಹೂವುಗಳಿಂದ ವಿಶೇಷವಾಗಿ ಶೃಂಗರಿಸಲಾಗುತ್ತದೆ. ಹೂವುಗಳು, ಕಾಡು ಬಳ್ಳಿ, ಹಣ್ಣು, ಹಿಂಗಾರ ಇತ್ಯಾದಿಗಳಿಂದ ಅಲಂಕರಿಸಲಾಗುತ್ತದೆ. ಹಿಂದೆಲ್ಲಾ ಪೂರ್ತಿಯಾಗಿ ಕಾಡಿನಿಂದ ಸಿಗುವ ಬಳ್ಳಿ, ಹೂವು,ಕಾಯಿಗಳಿಂದಲೇ ಬಲಿಯೇಂದ್ರನ ಅಲಂಕಾರ ಮಾಡಲಾಗುತ್ತಿತ್ತು. ಆದರೆ ಈಗ ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ಹೂವುಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಈಗಲೂ
ಕಾಡಿನ, ಕಾಯಿ, ಬಳ್ಳಿ, ಹೂವುಗಳಿಂದಲೇ ಅಲಂಕಾರ ಮಾಡುವವರೂ ಇದ್ದಾರೆ. ಒಟ್ಟಿನಲ್ಲಿ ಒಂದಕ್ಕಿಂತ ಮತ್ತೊಂದು ಭಿನ್ನವಾಗಿರುವ,

ವೈವಿಧ್ಯತೆಯನ್ನು ಸಾರುವ ಬಲಿಯೇಂದ್ರನನ್ನು ನೋಡುವುದೇ ಕಣ್ಣಿಗೆ ಚಂದ.. ಮನಸ್ಸಿಗೆ ಆನಂದ. ಅಲಂಕೃತಗೊಂಡ ಬಲಿಯೇಂದ್ರನ ಮುಂದೆ ದೀಪವನ್ನು ಬೆಳಗಿಸಿ, ಎಲೆಯ ಮೇಲೆ ನೀರು, ಅಕ್ಕಿ, ತೆಂಗಿನ ಕಾಯಿ, ಹಣ್ಣು, ಹೂವು, ಮತ್ತು ಅವಲಕ್ಕಿಯನ್ನು ಇರಿಸಿ. ಬಲಿಯೇಂದ್ರನ್ನು ಕರೆಯುವ ಮೂಲಕ ಆಚರಿಸಲಾಗುತ್ತದೆ. ಅಮಾವಾಸ್ಯೆಯ ದಿನ ಸಂಜೆ ಬಲಿಯೇಂದ್ರ ಮರವನ್ನು ನೆಟ್ಟು ಮೂರು ದಿನಗಳ ಕಾಲ ಮುಸ್ಸಂಜೆಯಲ್ಲಿ ಬಲಿಯೇಂದ್ರ ಪೂಜೆ ನೆರವೇರಿಸಲಾಗುತ್ತದೆ. ತುಳುನಾಡಾದ ದಕ್ಷಿಣ ಕನ್ನಡ , ಉಡುಪಿ, ಕಾಸರಗೋಡಿನ ವಿವಿಧ ತಲ ತಲಾತಲಾಂತರದಿಂದ ಅತ್ಯಂತ ನಿಷ್ಠೆ ಮತ್ತು ಭಕ್ತಿಯಿಂದ ಬಲಿಯೇಂದ್ರನ ಆಚರಣೆಯನ್ನು ಮಾಡುತ್ತಾರೆ. ನಗರ ಪ್ರದೇಶದಲ್ಲಿ ಈ ರೀತಿಯ ಆಚರಣೆಗಳು ವಿರಳವಾದರೂ
ಗ್ರಾಮೀಣ ಭಾಗದ ಮನೆಗಳಿಗೆ ತೆರಳಿದರೆ ಪ್ರತಿ ಮನೆಗಳಲ್ಲೂ ಆಕರ್ಷಕವಾಗಿ ಶೃಂಗರಿಸಿದ ಬಲಿಯೇಂದ್ರ ಮನ ಸೆಳೆಯುತ್ತಿದೆ. ಮನೆಗಳಲ್ಲಿ ಮಾತ್ರವಲ್ಲದೆ ವಿವಿಧ ದೇವಸ್ಥಾನಗಳಲ್ಲಿ ಶಾಸ್ತ್ರೋಕ್ತವಾಗಿ ಬಿಯೇಂದ್ರನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಬಲಿಯೇಂದ್ರ ಶೃಂಗಾರ ಸ್ಪರ್ಧೆಯೂ ಕೆಲವು ಸಂಘಟನೆಗಳು ನಡೆಸುತ್ತವೆ. ಮನೆ ಮನೆಗಳಿಗೆ ತೆರಳಿ ಆಕರ್ಷಕವಾಗಿ ಶೃಂಗರಿಸಿದ ಬಲೀಯೇಂದ್ರಕ್ಕೆ ಅಂಕವನ್ನು ನೀಡಿ ಅತೀ ಹೆಚ್ಚು ಅಂಕ ಪಡೆದ ಬಕಿಯೇಂದ್ರಕ್ಕೆ ಬಹುಮಾನವನ್ನು ನೀಡಲಾಗುತ್ತದೆ..