ನಾಗೋಯಾ: ಏಷ್ಯನ್ ಗೇಮ್ಸ್ ಶೂಟಿಂಗ್ ಮಹಿಳೆಯರ ವೈಯಕ್ತಿಕ ಟ್ರ್ಯಾಪ್ ಸ್ಪರ್ಧೆಯಲ್ಲಿ ಭಾರತದ ನೀರೂ ಧಂಡಾ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಮಹಿಳೆಯರ ಟ್ರ್ಯಾಪ್ ವಿಭಾಗದಲ್ಲಿ ವೈಯಕ್ತಿಕ ಚಿನ್ನ ಗೆದ್ದ ಭಾರತದ
ಮೊದಲ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ ನಡೆದ ಮಹಿಳೆಯರ ಟ್ರ್ಯಾಪ್ ತಂಡ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಡುವಲ್ಲಿ ನೀರೂ ಪ್ರಮುಖ ಪಾತ್ರ ವಹಿಸಿದ್ದರು.ಹರಿಯಾಣದ 26 ವರ್ಷದ ನೀರೂ, ಫೈನಲ್ ಸುತ್ತಿನಲ್ಲಿ 28 ಅಂಕಗಳನ್ನು ಗಳಿಸಿ ಅಗ್ರಸ್ಥಾನಕ್ಕೇರಿದರು. ಈ ಮೂಲಕ ಈ ಹಿಂದಿನ 24 ಅಂಕಗಳ ಏಷ್ಯನ್ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಭಾರತದ 4X400 ಮೀಟರ್ಸ್ ರಿಲೆ ತಂಡವು ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆದ್ದಿತು. ಮಂಗಳವಾರ ನಡೆದ ಓಟದಲ್ಲಿ ಕನ್ನಡತಿ ಎಂ.ಆರ್. ಪೂವಮ್ಮ, ಕಿರಣ್ ಪಹಲ್, ಪ್ರಾಚಿ ಮತ್ತು ವಿದ್ಯಾ ರಾಮರಾಜ್ ಅವರ ತಂಡವು ಚಿನ್ನದ ಪದಕ ಗಳಿಸಿತು.ಈ ಸ್ಪರ್ಧೆಯಲ್ಲಿ ಭಾರತ ತಂಡವು 3 ನಿಮಿಷ 29.69 ಸೆಕೆಂಡುಗಳಲ್ಲಿ ಗುರಿ ಮುಟ್ಟುವ ಮೂಲಕ ಮೊದಲ ಸ್ಥಾನ ಪಡೆಯಿತು. ಇದು ಈ ಬಾರಿಯ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಭಾರತಕ್ಕೆ ಸಿಕ್ಕ ಮೊದಲ ಚಿನ್ನದ ಪದಕವಾಗಿದೆ.
ಇದಕ್ಕೂ ಮುನ್ನ ನಡೆದ 4×100 ಮೀಟರ್ಸ್ ಮಿಶ್ರ ರಿಲೆ ಫೈನಲ್ನಲ್ಲಿ ಗುರಿಂದರ್ವೀರ್ ಸಿಂಗ್, ಅನಿಮೇಶ್ ಕುಜೂರ್, ಸ್ನೇಹಾ ಸತ್ಯನಾರಾಯಣ ಮತ್ತು ಹರಿತಾ ಭದ್ರಾ ಅವರಿದ್ದ ಭಾರತ ತಂಡವು 41 ನಿಮಿಷ 06 ಸೆಕೆಂಡ್ಗಳ ಗುರಿ ತಲುಪುವ ಮೂಲಕ ಕಂಚಿನ ಪದಕ ತನ್ನದಾಗಿಸಿಕೊಂಡಿತು.
ಮಹಿಳೆಯರ ಹೈಜಂಪ್ ಸ್ಪರ್ಧೆಯಲ್ಲಿ ಭಾರತದ 19 ವರ್ಷದ ಪೂಜಾ ಸಿಂಗ್ ಕಂಚಿನ ಪದಕ ಗೆದ್ದುಕೊಂಡರು.ಪುರುಷರ 5000 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಭಾರತದ ಗುಲ್ವೀರ್ ಸಿಂಗ್ ಕಂಚಿನ ಪದಕ ಗೆದ್ದರು.
ನೀರು ಧಂಡಾ, ಆಶಿಮಾ ಅಹ್ಲಾವತ್, ಮನೀಷಾ ಕೀರ್ ಅವರನ್ನೊಳಗೊಂಡ ಮಹಿಳಾ ಟ್ರ್ಯಾಪ್ ಶೂಟಿಂಗ್ ತಂಡ ಬೆಳ್ಳಿ ಗೆದ್ದಿತು. ಪುರುಷರ +90 ಕೆಜಿ ಬಾಕ್ಸಿಂಗ್ನಲ್ಲಿ ನರೇಂದ್ರ ಪರ್ವಾಲ್
ಕಂಚು ಗೆದ್ದರು.









