*ಡಾ. ಸುಂದರ ಕೇನಾಜೆ.
ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಎನ್ನುವ ಎರಡು ಆಯಾಮಗಳಲ್ಲಿ ನಮ್ಮ ಅಭಿವೃದ್ಧಿಯನ್ನು ಅವಲೋಕಿಸಿದಾಗ ವಸಾಹತುಶಾಹಿ ಮತ್ತು ಪ್ರಜಾಪ್ರಭುತ್ವವಾದಿ ಆಶಯಗಳ ನೆಲೆಯಿಂದಲೂ ನೋಡಬೇಕಾಗುತ್ತದೆ. ಹೀಗೆ ನೋಡುವ ಸಂದರ್ಭದಲ್ಲಿ ವಸಾಹತುಶಾಹಿ ವ್ಯವಸ್ಥೆಯ ವಿರುದ್ಧ ನಡೆದ ಶಸ್ತ್ರಾಸ್ತ್ರ ಹೋರಾಟಗಳು ಹಾಗೂ ಅದರ ಹಿಂದಿನ ಬ್ರಿಟೀಷ್ ಮನಸ್ಥಿತಿಯ ತೀರ್ಮಾನಗಳ ಬಗ್ಗೆಯೂ ಗಮನಿಸಬೇಕಾಗಿದೆ. ಈ ಹೋರಾಟಗಳೆಲ್ಲವೂ ಅಂತಿಮವಾಗಿ ನೀಡಿದ್ದು ರಕ್ತಸಿಕ್ತವಾದ ಪರಿಣಾಮವನ್ನೇ ಆದರೂ ಇಲ್ಲಿಯ ಉದ್ದೇಶ ಸಾರ್ವಜನಿಕವಾದುದು. ಹಾಗಾಗಿ ಅದೇ ನಮ್ಮ ಚರಿತ್ರೆಯ ಭಾಗವಾಗಿ, ಅದೊಂದು
ಒಪ್ಪಿತ ಸಂಗತಿಯಾಗಿ, ಅದನ್ನೇ ತಲೆಮಾರಿಗೂ ವರ್ಗಾಯಿಸುವ ಪಾಠವಾಗಿಯೂ ಮುಂದುವರಿಸಿದ್ದೇವೆ. ಆದರೆ ಗಾಂಧೀಜಿಯಂತವರ ಮುಖದಲ್ಲಿ ಬ್ರಿಟೀಷರು ಮಾನವತೆಯ ತೆಳುಪರದೆಯನ್ನು ಕಂಡದ್ದು ಬಿಟ್ಟರೆ, ಎಲ್ಲದಕ್ಕೂ ಕೊಟ್ಟ ಉತ್ತರ ಕ್ರೌರ್ಯದ ಪರಮಾವಧಿಯೇ ಆಗಿತ್ತು. ಅನಾರೋಗ್ಯ, ಬಡತನ, ಅಜ್ಞಾನ ಇತ್ಯಾದಿ ವ್ಯಕ್ತಿ ವಿರೋಧಿ ನೆಲೆಗಳ ಬಗ್ಗೆ ಗೊತ್ತಿದ್ದೂ ಅಭಿವೃದ್ಧಿಯನ್ನು ಶೋಷಣೆಯ ಅಸ್ತ್ರವಾಗಿ ಬದಲಾಯಿಸುವಲ್ಲಿ ಇವರು ಕೊಟ್ಟ ಕೊಡುಗೆ ಅಮಾನವೀಯವಾದುದು.
ಸ್ವಾತಂತ್ರ್ಯ ಹೋರಾಟದ ಆರಂಭದ ಕಾಲಘಟ್ಟದಿಂದಲೂ ಬ್ರಿಟೀಷ್ ವಿರೋಧೀ ಭಾರತೀಯರ ನೀತಿಗಳಿಗೆಲ್ಲ ರೌರವ ಉತ್ತರಗಳೇ ಸಿಗುತ್ತಿದ್ದವು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಮತ್ತು ಅದರ ಹಿಂದೆಮುಂದೆ ನಡೆದ ಘಟನೆಗಳು, ರೈತ ಹೋರಾಟಗಳು, ಬುಡಕಟ್ಟು ಜನರ ಪ್ರತಿಭಟನೆಗಳು, ತುಂಡರಸರ ವಿರೋಧಗಳು ಎಲ್ಲವೂ

ಬ್ರಿಟೀಷರಿಗೊಂದು ಜೀವದ ಜತೆಗಿನ ಚೆಲ್ಲಾಟ. ಈ ರಕ್ತದ ಚರಿತ್ರೆ ವಸಾಹತುಶಾಹಿ ವ್ಯವಸ್ಥೆ ಇರುವಲ್ಲಿಯವರೆಗೂ ಭಾರತದಲ್ಲಿ ಅಧಿಕೃತವಾಗಿ ನಡೆದಿವೆ. ಈ ಎಲ್ಲಾ ಹೋರಾಟಗಳು ಬ್ರಿಟೀಷರ ಸಾಮ್ರಾಜ್ಯಶಾಹಿ ವ್ಯವಸ್ಥೆಯ ವಿರುದ್ಧವಾಗಿ, ಅದಕ್ಕಿಂತಲೂ ಹೆಚ್ಚಾಗಿ ಜನರ ಕಷ್ಟನಷ್ಟ ನೋವುಗಳ ಭಾಗವಾಗಿ ನಡೆದದ್ದಾಗಿತ್ತು. ಆದ್ದರಿಂದ ವಸಾಹತುಶಾಹಿತ್ವ ಎನ್ನುವುದು ಮಾನವತೆಯನ್ನು ಮೀರಿದ ಕ್ರೌರ್ಯಕ್ಕೊಂದು ಕನ್ನಡಿ. ಬಡತನ ಮತ್ತು ಶೋಷಣೆಗೆ ಸಾಂತ್ವಾನ ನೀಡಲು ಯತ್ನಿಸಿದ ಬಲಿದಾನಗಳು, ರಕ್ತದ ಕೋಡಿಗಳು ಬೆಲೆ ಇಲ್ಲದ ಕೊಳೆ ನೀರಿನಂತೆ ಹರಿದು ಹೋದವು. ಆದರೆ ಇದು ಇಷ್ಟಕ್ಕೇ ನಿಲ್ಲದೇ ಇದರ ಇನ್ನೊಂದು ಕರಾಳ ಮುಖ, ಬ್ರಿಟೀಷರ ಸೇಡಿನ ರಾಜಕಾರಣದ ಆಡುಂಬೋಲವಾಗಿಯೂ ಈ ನಾಡು ಅನುಭವಿಸಿತು. ಹೋರಾಟ ನಡೆದ ಪ್ರದೇಶಗಳು ಸಾಸಿವೆ ಗಾತ್ರದ ಅಭಿವೃದ್ಧಿಯನ್ನೂ ಕಾಣದೇ ಶತಮಾನಗಳ ಕಾಲ ನಲುಗಿ ಹೋದದ್ದೇ ಈ ಅನುಭವ(ಅಮರ ಸುಳ್ಯ, ಚೆನ್ನಗಿರಿ, ಕಿತ್ತೂರು, ಕೊಪ್ಪಳ, ಸುರಪುರ, ಹಡಗಲಿ ಇಂತಹಾ ನೂರಾರು ಪ್ರದೇಶಗಳು ನೂರಾರು ವರ್ಷಗಳ ಕಾಲ ಎಲೆ ಉದುರಿಸಿದ ಮರದಂತಾಗಿದ್ದ ದಾಖಲೆಗಳಿವೆ)
ಬ್ರಿಟೀಷ್ ಹೋದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಇಂತಹಾ ರಕ್ತಸಿಕ್ತ ದಾಳಿಗಳು, ಬೀಭತ್ಸ ಕೃತ್ಯಗಳು, ದರೋಡೆ, ಪಾತಕ ಕಾರ್ಯಗಳು ವ್ಯವಸ್ಥೆಯ ವಿರುದ್ದ ಅನೇಕ ಪ್ರದೇಶಗಳಲ್ಲಿ ನಡೆದಿವೆ. ಸುತ್ತಮುತ್ತ ಅನೇಕರ ನಿದ್ದೆ ಕೆಡಿಸಿದ ನೆನಪುಗಳು ಜ್ವಲಂತವಾಗಿ ಕಣ್ಣ ಮುಂದಿವೆ. ಭಾರತದ ಪ್ರಜಾಪ್ರಭುತ್ವ ಎಂದರೆ ಗಾಂಧೀ ಪ್ರಭಾವದ ಅಹಿಂಸಾ ಹೋರಾಟ ಎಂದರ್ಥ. ಆದರೆ ಅದನ್ನು ಮೀರಿಸಿದ ಶಸ್ತ್ರಾಸ್ತ್ರಗಳನ್ನು ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ದುರುಪಯೋಗಪಡಿಸಿದ ನಿದರ್ಶನಗಳು ಬಹಳಷ್ಟಿವೆ. ಕೆಲವು ಉದಾಹರಣೆ ಗಮನಿಸಿ, ಇಪ್ಪತ್ತು ವರ್ಷಗಳ ಹಿಂದೆ ಕರ್ನಾಟಕದ ಮಲೆಮಾದೇಶ್ವರ ಬೆಟ್ಟದ ನೂರಾರು ಕಿ.ಮೀ ವ್ಯಾಪ್ತಿಯಲ್ಲಿ ವೀರಪ್ಪನ್ ಎಂಬವ ನಡೆಸಿದ ಭಯಾನಕ ಆಟೋಪಗಳು, ಬೆಂಗಳೂರು ಗ್ರಾಮಾಂತರ ಭಾಗದ ದಂಡುಪಾಳ್ಯ, ಚಂಬಲ್ ಕಣಿವೆಯ ಪೂಲನ್ ದೇವಿ ಇವೆಲ್ಲವೂ ವೈಯಕ್ತಿಕ ನೆಲೆಯಲ್ಲಿ ವ್ಯವಸ್ಥೆಯ ವಿರುದ್ಧದ ಶಸ್ತ್ರಾಸ್ತ್ರಗಳ ದುರ್ಬಳಕೆಯಾದರೆ, ಮಾವೋವಾದಿ ನಕ್ಸಲ್, ಎಲ್ಟಿಟಿಇ, ಗ್ಯಾಂಗ್ ವಾರ್ ಗಳು, ಈಶಾನ್ಯ ರಾಜ್ಯಗಳಲ್ಲಿ ನಡೆಸುವ ಹೋರಾಟಗಳು ಸಾಮೂಹಿಕ ಗುಂಡಿನ ಭಯಾನಕ ಕೃತ್ಯಗಳೇ ಆಗಿವೆ. ಇದರ ಹಿಂದಿನ ತಾತ್ವಕ ಚರ್ಚೆಗಳು ಏನೇ ಇದ್ದರೂ ಬಡತನ, ಅನಕ್ಷರತೆ, ಅನಭಿವೃದ್ಧಿಯ ಹಿನ್ನೆಲೆಗಳೇ ಈ ಶಸ್ತ್ರಾಸ್ತ್ರ ಬಳಕೆಗೆ ಪ್ರೇರಣೆ ಎನ್ನುವುದನ್ನು ಯಾರೂ ಅಲ್ಲಗಳೆಯುವುದಿಲ್ಲ.

ಆದರೆ ಈ ರಕ್ತಸಿಕ್ತ ಧೋರಣೆಯ ಹಿಂದೆ ವಸಾಹತು ಚರಿತ್ರೆಯ ಛಾಯಾಪ್ರತಿಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯೂ ಅನುಕರಿಸುತ್ತಾ ಬಂದುದ್ದನ್ನು ಗಮನಿಸಬಹುದು. ಅಂದರೆ ಮೇಲೆ ಹೇಳಿದ ಕ್ರಾಂತಿಯ ಪ್ರತೀಕಾರದಲ್ಲಿ ಅನಭಿವೃದ್ದಿಯ ಸೇಡು ಹೇಗೆ ಬ್ರಿಟೀಷರದ್ದಾಗಿತ್ತೋ ಹಾಗೇ ಸ್ವಾತಂತ್ರ್ಯಾನಂತರದ ಪ್ರಜಾಪ್ರಭುತ್ವವಾದೀ ಕಾಲದ್ದೂ ಆಗಿದೆ. ಹಾಗಾಗಿಯೇ ಚರಿತ್ರೆ ಮರುಕಳಿಸುತ್ತದೆ ಮತ್ತು ದೇಶ, ಕಾಲಾತೀತವಾಗಿ ನಿಲ್ಲುತ್ತದೆ ಎನ್ನುವುದು. ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ನಂತರದ ಅಶ್ವತ್ಥಾಮ ಮನಸ್ಥಿತಿಗೊಳಗಾದ ಬಿಡಾರಗಳನ್ನು ಗಮನಿಸಿದರೆ ವಾಸ್ತವದ ಅರಿವಾಗುತ್ತದೆ. ವೀರಪ್ಪನ್ ಆಟೋಪಗಳು ನಡೆದ ಮಲೆಮಾದೇಶ್ವರ ಬೆಟ್ಟದ ಒಂದಷ್ಟು(ಪಾಲಾರ್, ಗೋಪಿನಾಥಂ, ಹೊಗೇನೆಕಲ್ಲ್ ) ಪ್ರದೇಶಗಳನ್ನೇ ತೆಗೆದುಕೊಂಡರೆ ಸ್ವಾತಂತ್ರ್ಯಪೂರ್ವದ ಅದೇ ಪರಿಕಲ್ಪನೆ ಈಗಲೂ ಕಾಣಸಿಗುತ್ತದೆ(ಇತ್ತೀಚೆಗೆ ಸ್ನೇಹಿತರ ಬಳಗದೊಂದಿಗೆ ಭೇಟಿ ನೀಡಿ, ನೋಡಿದ ಅನುಭವ).
ಆತ ನಡೆಸಿದ ನರಬೇಟೆ, ಪ್ರಾಣಿ ಬೇಟೆಯಿಂದ ಒಂದು ಪ್ರದೇಶ ಅನೇಕ ದಶಕಗಳ ವರೆಗೆ ಜರ್ಜರಿತವಾದದ್ದು ಹೇಗೆ ಕರಾಳವೋ ಆತನ ಆಟೋಪಗಳನ್ನು ಅಂತ್ಯಗೊಳಿಸಿ ಎರಡು ದಶಕಗಳೇ ಕಳೆದರೂ ಈ ಗಡಿ ಪ್ರದೇಶಗಳು ಸಮಸ್ಯೆಗಳ ಆಗರವಾಗಿಯೇ ಉಳಿದಿರುವುದು ಅಷ್ಟೇ ನತದೃಷ್ಟ. ಜನ ನಿರ್ಲಿಪ್ತರಾಗಿರುವುದು ಅಥವಾ ಮೂಕವಾಗಿ ಅನುಭವಿಸುತ್ತಿರುವುದು, ಇಪ್ಪತ್ತು ವರ್ಷಗಳ ಹಿಂದೆ ವೈಯುಕ್ತಿಕ ನೆಲೆಯಿಂದ ನಡೆಸಿದ ರಕ್ತಸಿಕ್ತ ಚರಿತ್ರೆಯಿಂದ ಎನ್ನುವುದು ಇಂದು ಎಷ್ಟು ಅಪ್ರಸ್ತುತವೋ ಅಭಿವೃದ್ಧಿಯ ಪರಿಕಲ್ಪನೆ ಇನ್ನೂ ನವೀಕರಿಸಲ್ಪಟ್ಟಿಲ್ಲ ಎನ್ನುವುದೂ ಅಷ್ಟೇ ಸತ್ಯ. ಅಂದರೆ ಅಭಿವೃದ್ಧಿಗೆ ಪೂರಕವಾದ ಕನಿಷ್ಠ ಸೌಕರ್ಯಗಳನ್ನು ಹೇಗೆ ಬ್ರಿಟೀಷರಿಂದ ಪಡೆಯಲು ಕ್ರಾಂತಿಕಾರಿ ಸ್ಥಳಗಳಿಗೆ ನೂರು ವರ್ಷಗಳಾದರೂ ಸಾಧ್ಯವಾಗಲಿಲ್ಲವೋ ಹಾಗೇ ದುಷ್ಕೃತ್ಯಗಳಿಗೆ ಸಾಕ್ಷಿಯಾದ ನಿರಪರಾಧಿ ಸ್ಧಳಗಳಿಗೂ ಸಾಧ್ಯವಾಗಿಲ್ಲ. ಇದು ಕೇವಲ ವೀರಪ್ಪನ್ ಪ್ರಭಾವಕ್ಕೆ ಒಳಗಾದ ಪ್ರದೇಶವೊಂದಕ್ಕೆ ಮಾತ್ರ ಸೀಮಿತವಾದ ಸಂಗತಿಯಲ್ಲ. ವ್ಯವಸ್ಥೆಗೆ ವಿರುದ್ಧವಾಗಿದ್ದ ಬಹುತೇಕ ಎಲ್ಲಾ ಪ್ರದೇಶಗಳ ಕಥೆಯೂ ಕೂಡ.
ಆದ್ದರಿಂದ ವಸಾಹತುಶಾಹಿ ವ್ಯವಸ್ಥೆಯನ್ನು ಬಹಿಸ್ಕರಿಸಿ, ಪ್ರಜಾಪ್ರಭುತ್ವವಾದಿ ವ್ಯವಸ್ಥೆಯನ್ನು ಪುರಸ್ಕರಿಸುವ ಕಾಲದಲ್ಲಿ ಈ ರೀತಿಯ ಪ್ರಾದೇಶಿಕ ಅಸಮತೋಲನಗಳು ಇನ್ನೂ ಇವೆ ಎಂದರೆ ಅದು ವಸಾಹತುಶಾಹಿ ವ್ಯವಸ್ಥೆಯ ಕರಿಛಾಯೆಯೇ ಅಗಿರುತ್ತದೆ. ಇದು ಬ್ರಿಟೀಷರಂತೇ ರಕ್ತಸಿಕ್ತ ಚರಿತ್ರೆಗೆ ನೀಡುವ ಪ್ರೇರಣೆಯೂ ಆಗುತ್ತದೆ. ಅಭಿವೃದ್ಧಿ ಎನ್ನುವ ನಗರ ಕೇಂದ್ರಿಕೃತ ಕಲ್ಪನೆಯನ್ನು ತೆಗೆದು ಕನಿಷ್ಠ ಮೂಲಭೂತ ಅವಶ್ಯಕತೆಯ ಆಶಯ ಸ್ವಾತಂತ್ರ್ಯ ನಂತರದ ಈ ಎಂಬತ್ತು ವರ್ಷಗಳಲ್ಲಾದರೂ ಬರಬೇಕು. ಹಾಗಾದಾಗ ಅಸಮಾಧಾನಗಳು ತನ್ನಿಂದ ತಾನೇ ಕರಗಿ ಹೋಗಬಹುದು. ಬ್ರಿಟೀಷರ ಸೇಡಿನ ಅನಭಿವೃದ್ಧಿಯ ಪರಿಕಲ್ಪನೆಯನ್ನು ಬಿಟ್ಟು ಪ್ರಜಾಪ್ರಭುತ್ವವಾದಿ ಅಭಿವೃದ್ಧಿಯನ್ನು (ಪ್ರಜಾಪ್ರಭುತ್ವದ ಪರ್ಯಾಯ ಹೆಸರು ಅಭಿವೃದ್ಧಿ) ಪುರಸ್ಕರಿಸುವುದು, ಅದಕ್ಕಾಗಿ ಗಾಂಧೀಜಿಯವರ ಅಭಿವೃದ್ಧಿಯ ಪರಿಕಲ್ಪನೆಗಳನ್ನು ಕನಿಷ್ಠವಾದರೂ ಅನುಸರಿಸುವುದು ಎಲ್ಲದಕ್ಕೂ ಪರಿಹಾರ.

(ಡಾ. ಸುಂದರ ಕೇನಾಜೆ ಅಧ್ಯಾಪಕರು,ಅಂಕಣಕಾರರು, ಜಾನಪದ ಸಂಶೋಧಕರು ಹಾಗೂ ಲೇಖಕರು)