*ಗಣೇಶ್ ಮಾವಂಜಿ.
ಸುಮಾರು ಎರಡು ದಶಕಗಳ ಹಿಂದೆ ಪಿಯುಸಿಯ ಕಲಾ ವಿಭಾಗದ ಇತಿಹಾಸದ ಪಠ್ಯದಲ್ಲಿ ಬ್ಯಾಬಿಲೋನನ್ನು ಆಳಿದ ಹಮ್ಮುರಬಿ ಎಂಬ ರಾಜನ ಉಲ್ಲೇಖ ಇತ್ತು. ಆತನ ಆಳ್ವಿಕೆಯಲ್ಲಿ ಆತ ಅಳವಡಿಸಿದ ಕಾನೂನು ಬಲು ಕಠೋರವಾಗಿತ್ತು. ಕೋಡ್ ಆಫ್ ಹಮ್ಮುರಬಿ ಎಂಬ ಆ ಕಾನೂನು ಹೇಗಿತ್ತೆಂದರೆ ಯಾವನೇ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಕಣ್ಣು ತೆಗೆದನೆಂದರೆ ಪ್ರತಿಯಾಗಿ ಆತನಿಗೆ ನೀಡುವ ಶಿಕ್ಷೆ ಆತನ ಕಣ್ಣನ್ನೇ ಕೀಳುವುದು. ಹಲ್ಲುದುರಿಸಿದ್ದಾನೆಂದರೆ ಆತನ ಹಲ್ಲನ್ನೇ ಕಿತ್ತು ಕೈಗೆ ಕೊಡುವುದು. ಹೀಗಾದಾಗ ಇನ್ನೊಬ್ಬನಿಗೆ ಮಾಡಿದ ಅನ್ಯಾಯ, ನೋವಿನ
ಅರಿವು ತಪ್ಪೆಸಗಿದ ಆತನಿಗೂ ಸರಿಯಾಗಿ ಅರ್ಥವಾಗುತ್ತದೆ ಎಂಬುದು ಹಮ್ಮುರಬಿ ಎಂಬ ಆ ರಾಜನ ನಿಲುವಾಗಿತ್ತು.
ಆದರೆ ಭಾರತದ ಕಾನೂನು ವ್ಯವಸ್ಥೆಗೆ ಹಮ್ಮುರಬಿಯ ಕಾನೂನನ್ನು ಹೋಲಿಕೆ ಮಾಡುವಂತಿಲ್ಲ. ಏಕೆಂದರೆ ಇಲ್ಲಿನ ಕಾನೂನಿನ ಪ್ರಕಾರ ಯಾವನಾದರೂ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಮುಖ ಮೂತಿ ಚಚ್ಚಿ ಊದುವಂತೆ ಮಾಡಿದ್ದಾನೆಂದರೆ ಅದನ್ನು ಕಣ್ಣಾರೆ ನೋಡಿದ ಒಂದಷ್ಟು ಸಾಕ್ಷಿಗಳು ಇರಬೇಕು. ಅವರು ನ್ಯಾಯಾಲಯದ ಕಟಕಟೆಯಲ್ಲಿ ನಿಂತು ತಾವು ಕಣ್ಣಾರೆ ನೋಡಿದ್ದಾಗಿ ಸಾಕ್ಷ್ಯ ನುಡಿಯಬೇಕು.ಹಾಗಿದ್ದರೆ ಅನ್ಯಾಯ ಎಸಗಿದಾತನಿಗೆ ಶಿಕ್ಷೆ ಆಗದು. ಆರೋಪಿಯ ಪರವಾಗಿ ವಾದಿಸುವ ವಕೀಲ ಒಂದಷ್ಟು ಕಾಲಾವಕಾಶ ಕೋರುತ್ತಾನೆ. ಇನ್ನಿಲ್ಲದ ಸಬೂಬು ನೀಡುತ್ತಾ ವಾದಿಸುತ್ತಾರೆ. ಕೊನೆಗೆ ಪೂರಕ ಸಾಕ್ಷಿ ನೀಡಿದ ಬಳಿಕ ಆರೋಪಿ, ಅಪರಾಧಿ ಎಂದು ಸಾಬೀತಾದರೂ ಹಮ್ಮುರಬಿಯ ಕಾನೂನಂತೆ ಆತನ ಮುಖ ಮೂತಿ ಚಚ್ಚುವ ಮಾತೇ ಇಲ್ಲ. ಬದಲಾಗಿ ಒಂದಷ್ಟು ದಿನಗಳ ಜೈಲುವಾಸ, ಹೊಡೆದದ್ದಕ್ಕೆ ಒಂದಷ್ಟು ದಂಡವಾಗಿ ಎಣಿಸಿಬಿಟ್ಟರೆ ಹೊಡೆಸಿಕೊಂಡಾತನಿಗೆ ನ್ಯಾಯಾಲಯ ನ್ಯಾಯ ನೀಡಿದಂತೆ.
ಹೀಗಾದರೆ ತಪ್ಪು ಮಾಡಿದವ ಮತ್ತಷ್ಟು ಉಬ್ಬದೆ ಇರುತ್ತಾನೆಯೇ? ಇನ್ನಷ್ಟು ಕೊಬ್ಬಿ ಮತ್ತೊಂದಷ್ಟು ಮುಗ್ಧರ ಕಪಾಳ ಊದುವಂತೆ
ಮಾಡದಿರುತ್ತಾನೆಯೇ. ಎಷ್ಟೋ ಸಂದರ್ಭಗಳಲ್ಲಿ ಅಂದು ಓದಿದ ಆ ಹಮ್ಮುರಬಿ ರಾಜ ನೆನಪಾಗುತ್ತಾನೆ. ಆತನ ಕಾನೂನಾದ ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ತೆಗೆಯುವ ಆ ಶಿಕ್ಷೆ ಇಲ್ಲಿಯೂ ಬೇಕಿತ್ತು ಎನಿಸುತ್ತದೆ.
ಪ್ರಸ್ತುತ ಸನ್ನಿವೇಶದಲ್ಲಿ ಈ ರೀತಿಯ ಶಿಕ್ಷೆ ವಿಧಿಸುವಿಕೆಗೆ ನೈಜ ಅರ್ಥವಿದೆ. ಆದರೆ ಈಗ ಸಮಾಜದಲ್ಲಿ ಆಗುತ್ತಿರುವುದು ಮಾತ್ರ ಅದಕ್ಕೆ ತದ್ವಿರುದ್ಧ. ಯಾರೋ ಅನ್ಯಾಯ ಮಾಡಿ, ಅನ್ಯಾಯಕ್ಕೊಳಗಾಗಿ ಅಮಾಯಕರು ಶಿಕ್ಷೆ ಅನುಭವಿಸುವ ಪರಿಸ್ಥಿತಿ ಈಗಿದೆ. ಇತ್ತೀಚೆಗೆ ನಡೆದ ಪಹಲ್ಗಾಮ್ ದಾಳಿಯನ್ನು ತೆಗೆದುಕೊಂಡರೆ ಅಲ್ಲಿ ಮಡಿದವರಲ್ಲಿ ಯಾರೂ ಕೂಡಾ ಯಾರಿಗೂ ಅನ್ಯಾಯ ಮಾಡಿದವರಾಗಿರಲಿಲ್ಲ. ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣದ ನಂತರ ನಡೆದ ಮೂರ್ನಾಲ್ಕು ಚೂರಿ ಇರಿತ ಪ್ರಕರಣಗಳನ್ನು ತೆಗೆದುಕೊಂಡರೆ ಅಲ್ಲಿನ ಸಂತ್ರಸ್ತರು ಯಾವುದೇ ಅಪರಾಧಗಳಲ್ಲಿ ಭಾಗಿಗಳಾದವರಲ್ಲ. ಹಾಗಿದ್ದರೂ ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಗುರಿಯಾಗಿಸಿ ದಾಳಿ ಮಾಡಿದರೆ ಅಂತವರನ್ನು ಆ ದೇವರು ಮೆಚ್ಚಬಹುದೇ? ಒಂದು ವೇಳೆ ಮೆಚ್ಚಿದರೆ ಆ ದೇವರನ್ನು ದೇವರೆಂದು ನಂಬಬಹುದೇ?
ಇನ್ನೊಂದು ವಿಚಾರ. ತಂದೆ ತಪ್ಪು ಮಾಡಿದರೆ ಮಗನಿಗೆ ಶಿಕ್ಷೆ ಕೊಟ್ಟರೆ ಅಥವಾ ಮಗ ತಪ್ಪು ಮಾಡಿದ್ದಾನೆಂದರೆ ಆತನ ತಂದೆ-ತಾಯಿಗೋ, ಅಕ್ಕ-ತಂಗಿಗೋ, ಅಣ್ಣ-ತಮ್ಮನಿಗೋ ಶಿಕ್ಷೆ ನೀಡಿದರೆ ಅದಕ್ಕೆ ಅರ್ಥ ಇದೆಯೇ? ಯಾರು ತಪ್ಪು ಮಾಡಿದ್ದಾರೋ ಅಂತವರಿಗೆ ಅವರು ಮಾಡಿದ ತಪ್ಪಿನ ಎರಡರಷ್ಟು ಶಿಕ್ಷೆ ದೊರಕಲಿ. ಆದರೆ ಯಾವನೋ ಒಬ್ಬ ಮಾಡಿದ ತಪ್ಪಿಗಾಗಿ ಆತನ ಮನೆಯವರು,ಆತನ ಸಮುದಾಯ, ಆತನ ಧರ್ಮದವರಿಗೆ ಶಿಕ್ಷೆ ನೀಡುವ ಅವಿವೇಕಿತನ ಏಕೆ? ಯಾವ ಧರ್ಮದಲ್ಲೂ ಇನ್ನೊಂದು ಧರ್ಮದವರನ್ನು ಹೊಡಿ, ಬಡಿ, ಕೊಲ್ಲೆಂದು ಬೋಧಿಸಿರಲು ಸಾಧ್ಯವೇ ಇಲ್ಲ.
ಇಲ್ಲಿನ ಕೆಲವೊಂದು ನಂಬಿಕೆಗಳಿಗೂ ತಲೆಬುಡ ಇಲ್ಲವೆಂದೇ ಅನಿಸುತ್ತದೆ ಏಕೆ ಗೊತ್ತಾ? ಅಂಗ ವೈಕಲ್ಯತೆ ಹೊಂದಿದ ಮಗು ಜನಿಸಿದರೆ ಆ ಮಗುವಿನ ಹೆತ್ತವರು ಕಳೆದ ಇನ್ನೊಂದು ಜನ್ಮದಲ್ಲಿ ಅದೇನೋ ಪಾಪ ಮಾಡಿದ್ದಾರೆ ಎಂದಂದುಕೊಳ್ಳುವುದು. ಯಾವುದೋ ವಾಸಿಯಾಗದ ರೋಗ ಬಾಧಿಸಿದರೆ ಹೋದ ಜನ್ಮದಲ್ಲಿ ಯಾರಿಗೋ ಅನ್ಯಾಯ ಮಾಡಲಾಗಿದೆ ಎಂದುಕೊಳ್ಳುವುದು…,ಇವೆಲ್ಲಾ ನಂಬಿಕೆಗಳಿಗೆ ಅರ್ಥವೇ ಇಲ್ಲ. ಏಕೆಂದರೆ ತಪ್ಪು ಮಾಡಿದ ವ್ಯಕ್ತಿಗೆ ತಪ್ಪಿನ ಅರಿವಾಗಬೇಕಿದ್ದರೆ ತಪ್ಪು ಮಾಡಿದ ಕೂಡಲೇ ಶಿಕ್ಷೆಯಾಗಬೇಕು. ಯಾವುದೋ ಜನ್ಮದಲ್ಲಿ ಮಾಡಿದ ತಪ್ಪಿಗೆ ಇನ್ನೊಂದು ಜನ್ಮದಲ್ಲಿ ಶಿಕ್ಷೆ ಸಿಗುತ್ತದೆ ಎಂದಾದರೆ ಅದಕ್ಕೆ ಅರ್ಥ ಇದೆಯೇ? ಕೆಲವೊಬ್ಬರು ಜ್ಯೋತಿಷಿಗಳೂ ಇದೇ ನಂಬಿಕೆಯನ್ನು ಪುಷ್ಠೀಕರಿಸಿ ಆಸ್ತಿಕರಲ್ಲಿ ದಿಗಿಲು ಹುಟ್ಟಿಸುತ್ತಾರೆ. ಯಾವುದೋ ಜನ್ಮದ ಪಾಪಕ್ಕೆ ಪ್ರಾಯಶ್ಚಿತವಾಗಿ ಈ ಜನ್ಮದಲ್ಲಿ ಪ್ರಾಯಶ್ಚಿತ ಹೋಮ ಹವನಾದಿಗಳನ್ನು ಮಾಡಿಸುವುದು, ಪೂರ್ವಜರ ತಪ್ಪನ್ನು ಸರಿಪಡಿಸಲು ಮರಿ ಮೊಮ್ಮಕ್ಕಳಿಗೆ ಪ್ರಾಯಶ್ಚಿತ ಕ್ರಿಯೆಗಳನ್ನು ನಡೆಸುವಂತೆ ಸೂಚಿಸುವುದು.., ಹೀಗೆ ನಂಬಿಕೆಗಳನ್ನೇ ಅಸ್ತ್ರವಾಗಿಸಿ ಜೀವನ ನಿರ್ವಹಣೆಯ ದಾರಿಯನ್ನು ಕಂಡುಕೊಂಡಿರುವುದು ಕೂಡಾ ವಿಪರ್ಯಾಸ.
ಇನ್ನು ಕೊಲೆ, ಕೊಲೆ ಯತ್ನದಂತಹಾ ಪ್ರಕರಣಗಳನ್ನು ರಾಜಕೀಯವಾಗಿ ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳುವುದು ಈಗಿನ ಟ್ರೆಂಡ್ ಮಾತ್ರ ಅಲ್ಲ. ಇದಕ್ಕೆ ಅನಾದಿ ಕಾಲದ ಇತಿಹಾಸ ಇದೆ. ಇದಕ್ಕೆ ಯಾವ ಪಕ್ಷವೂ ಹೊರತಾಗಿಲ್ಲ. ಆಳುವ ಪಕ್ಷ ವಿರೋಧ ಪಕ್ಷವಾದಾಗ, ವಿರೋಧ ಪಕ್ಷ ಆಳುವ ಪಕ್ಷವಾಗಿ ಮಾರ್ಪಾಡಾದಾಗ ಈ ರೀತಿಯ ಪ್ರಕರಣಗಳಿಗೆ ರಾಜಕೀಯ ಲೇಪಿಸಿ ಅದನ್ನು ಅಸ್ತ್ರವಾಗಿ ಬಳಸಿಕೊಂಡ ಉದಾಹರಣೆಗಳು ಇತಿಹಾಸದಲ್ಲಿ ಅಸಂಖ್ಯ. ಆದರೆ ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆ ವಿಧಿಸುವಂತೆ ನೋಡಿಕೊಳ್ಳಬೇಕಾದುದು ಆಳುವ ಹಾಗೂ ವಿರೋಧ ಪಕ್ಷದ ಪ್ರತಿಯೊಬ್ಬರ ಕರ್ತವ್ಯ. ಅದರಲ್ಲೂ ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ಬ್ಯಾಬಿಲೋನನ್ನು ಆಳಿದ ಹಮ್ಮುರಬಿಯ ಕಾನೂನು ಜಾರಿಯಾದರೆ ಇನ್ನಷ್ಟು ಉತ್ತಮ..!

(ಗಣೇಶ್ ಮಾವಂಜಿ ಪತ್ರಕರ್ತರು ಹಾಗೂ ಅಂಕಣಕಾರರು)