ಸುಳ್ಯ:ಮೆಸ್ಕಾಂ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆ ಮೇ.6 ರಂದು ಸುಳ್ಯ ಉಪವಿಭಾಗ ಕಛೇರಿಯಲ್ಲಿ ನಡೆಯಿತು. ಸುಳ್ಯದಲ್ಲಿ ಉಂಟಾಗುತ್ತಿರುವ ನಿರಂತರ ವಿದ್ಯುತ್ ಕಡಿತಕ್ಕೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿ, ನಿರಂತರ ವಿದ್ಯುತ್ ಕಡಿತದ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.110 ಕೆವಿ ಲೈನ್ ಹಾಗೂ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿ ವಿಳಂವಾಗುವುದು ಯಾಕೆ, ಸಬ್ ಸ್ಟೇಷನ್ ಕಾಮಗಾರಿ ಯಾವಾಗ ಪೂರ್ತಿಯಾಗುತ್ತದೆ ಎಂದು ಗ್ರಾಹಕರು ಪ್ರಶ್ನಿಸಿದರು.ತಾಲೂಕಿನಲ್ಲಿ ವಿದ್ಯುತ್ ಕಡಿತವಾದರೆ ಅದನ್ನು
ಕೂಡಲೇ ಸರಿಪಡಿಸಲಾಗುತ್ತಿಲ್ಲ. ಲೈನ್ಮೆನ್ ಕೊರತೆಯಿಂದ ದುರಸ್ತಿ ಕಾರ್ಯ ಹಾಗೂ ನಿರ್ವಹಣೆ ವಿಳಂಬವಾಗುತಿದೆ. ಗ್ರಾಮೀಣ ಭಾಗದಲ್ಲಿ ವಾರಗಟ್ಟಲೆ ವಿದ್ಯುತ್ ಕಡಿತದ ಸಮಸ್ಯೆ ಉಂಟಾಗುತ್ತದೆ. ಆದುದರಿಂದ ಲೈನ್ ಮೆನ್ಗಳ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಮತ್ತು ಮಳೆಗಾಲಕ್ಕೆ ಮುನ್ನ ಲೈನ್ಗಳಿಗೆ ತಾಗುವ ಗೆಲ್ಲುಗಳನ್ನು ಕಡಿಯಬೇಕು, ಲೈನ್ ಮೆನ್ ನೇಮಕ ಮತ್ತು ಮರದ ಗೆಲ್ಲು ಕಡಿಯಲು ಕ್ರಮ ಕೈಗೊಂಡರೆ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರ ಕಾಣಬಹುದು ಎಂದು ಅಭಿಪ್ರಾಯ ವ್ಯಕ್ತವಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವೃತ್ತ ಕಛೇರಿಯ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಮಾತನಾಡಿ ‘ ಕೆಪಿಟಿಸಿಎಲ್ ನೇತೃತ್ವದಲ್ಲಿ 110 ಕೆವಿ ಸಬ್ ಸ್ಟೇಷನ್ ಹಾಗೂ ಲೈನ್ ಕಾಮಗಾರಿ ನಡೆಯುತಿದೆ.110 ಕೆ.ವಿ.ಲೈನ್ ಪೂರ್ತಿಯಾಗುವ ತನಕ ವಿದ್ಯುತ್ ಸಮಸ್ಯೆ ಉಂಟಾಗಬಾರದು, ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು ಎಂಬ ನಿಟ್ಟಿನಲ್ಲಿ 33 ಕೆವಿ ಲೈನ್ಗೆ ಪರ್ಯಾಯವಾಗಿ ಬೆಳ್ಳಾರೆಯಿಂದ ಸುಳ್ಯಕ್ಕೆ ಭೂಗರ್ಭ ಕೇಬಲ್ ಮೂಲಕ 33 ಕೆವಿ ಲೈನ್ ನಿರ್ಮಾಣ ಮಾಡಲಾಗುವುದು, ಕಾವು- ಸುಳ್ಯ ಏಕ ಪಥ ಮಾರ್ಗವನ್ನು ಕೌಡಿಚ್ಚಾರಿನಿಂದ ಕಾವು ಜಂಕ್ಷನ್ವರೆಗೆ ದ್ವಿಪಥ ಮಾರ್ಗವಾಗಿ ಬದಲಾಯಿಸಲಾಗಿದೆ ಎಂದು ವಿವರಿಸಿದರು. ನಿರಂತರ ವಿದ್ಯುತ್ ಪೂರೈಕೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
110 ಕೆವಿ ಸಬ್ಸ್ಟೇಷನ್ ಕಾಮಗಾರಿ ವೇಗ ಹೆಚ್ಚಿಸಲು ಮೆಸ್ಕಾಂ ಎಂಡಿ ನೇತೃತ್ವದಲ್ಲಿ ಸುಳ್ಯದಲ್ಲಿ ಮೆಸ್ಕಾಂ, ಕೆಪಿಟಿಸಿಎಲ್ ಹಾಗೂ ಜನಪ್ರತಿನಿಧಿಗಳ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಬೇಕು ಎಂದು ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ ಹೇಳಿದರು.
110 ಕೆವಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಅನುಷ್ಟಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನ.ಪಂ.ಸದಸ್ಯ ಎಂ.ವೆಂಕಪ್ಪ ಗೌಡ ಒತ್ತಾಯಿಸಿದರು.
ತಾಲೂಕಿನ ವಿವಿಧ ಕಡೆಗಳಲ್ಲಿ ಲೈನ್ಗೆ ಬೀಳುವ ಮರದ ಗಲ್ಲು ಕಡಿಯದೆ ಸಮಸ್ಯೆಯಾಗಿದೆ, ವಿದ್ಯುತ್ ಕಡಿತ ಉಂಟಾದರೆ ಇಂಜಿನಿಯರ್ಗಳು, ಲೈನ್ಮೆನ್ಗಳು ಸ್ಪಂದಿಸುವುದಿಲ್ಲ, ಕರೆ ಸ್ವೀಕರಿಸುವುದಿಲ್ಲ ಎಂದು ವಿವಿಧ ಕಡೆಗಳಿಂದ ಆಗಮಿಸಿದ ಹಲವು ಮಂದಿ ಗ್ರಾಹಕರು ದೂರಿದರು. ಲೈನ್ಮೆನ್ಗಳ ಹುದ್ದೆ ಭರ್ತಿ ಮಾಡಬೇಕು, ಹೆಚ್ಚುವರಿಯಾಗಿ ಮಾನ್ಸೂನ್ ಲೈನ್ಮೆನ್ಗಳ, ಗ್ಯಾಂಗ್ಮೆನ್ಗಳ ನೇಮಕ ಮಾಡಬೇಕು ಎಂದು ಒತ್ತಾಯಿಸಲಾಯಿತು. ಸುಳ್ಯಕ್ಕೆ ಸಮೀಪವೇ ಇರುವ ಉಬರಡ್ಕ ಮಿತ್ತೂರು ಗ್ರಾಮವನ್ನು ಜಾಲ್ಸೂರು ಸೆಕ್ಷನ್ಗೆ ಸೇರಿಸಿದ್ದಕ್ಕೆ ಹಿಂದೆಯೇ ವಿರೋಧ ವ್ಯಕ್ತವಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ಪರಿಹಾರ ಆಗಿಲ್ಲ, ಉಬರಡ್ಕ ಗ್ರಾಮವನ್ನು ಸುಳ್ಯ ಶಾಖೆಯ ವ್ಯಾಪ್ತಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಪಿ.ಎಸ್.ಗಂಗಾಧರ ಸಭೆಯ ಗಮನಕ್ಕೆ ತಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯಲಕ್ಷ್ಮಿ, ಸುಬ್ರಹ್ಮಣ್ಯ ಉಪ ವಿಭಾಗದ
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ್, ಸುಳ್ಯ ಸಹಾಯಕ ಇಂಜಿನಿಯರ್ ಸುಪ್ರೀತ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಪ್ರಮುಖರಾದ ಎಂ.ವೆಂಕಪ್ಪ ಗೌಡ, ಜಿ.ಕೆ ಹಮೀದ್ ಗೂನಡ್ಕ, ಪಿ.ಎಸ್.ಗಂಗಾಧರ, ಸುರೇಶ್ ಅಮೈ, ರಿಯಾಝ್ ಕಟ್ಟೆಕ್ಕಾರ್ಸ್, ನಂದರಾಜ ಸಂಕೇಶ್, ರಹೀಮ್ ಬೀಜದಕಟ್ಟೆ, ಬಾಲಗೋಪಾಲ ಸೇರ್ಕಜೆ, ಧೀರಾ ಕ್ರಾಸ್ತಾ, ಬಾಲಕೃಷ್ಣ ಭಟ್ ಕೊಡೆಂಕೇರಿ, ಮಹೇಶ್ ಬೆಳ್ಳಾರ್ಕರ್, ನಝೀರ್ ಶಾಂತಿನಗರ, ಸತ್ಯಕುಮಾರ್ ಆಡಿಂಜ, ರಾಧಾಕೃಷ್ಣ ಪರಿವಾರಕಾನ, ರಾಬಿಯಾ, ಹರೀಶ್ ಉಬರಡ್ಜ, ಎಸ್.ಕೆ.ಹನೀಫ್, ಲತೀಫ್ ಅಡ್ಕಾರ್, ಜುನೈದ್ ಅಡ್ಕಾರ್, ದಿನೇಶ್ ಸರಸ್ವತಿಮಹಲ್, ಜಮಾಲುದ್ದೀನ್ ಪಂಜ, ಯೂಸೂಫ್ ಅಂಜಿಕ್ಕಾರ್, ಅಬೂಬಕ್ಕರ್ ಅರಫ ಮತ್ತಿತರರು ವಿವಿಧ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.
ಮೆಸ್ಕಾಂ ಸಹಾಯಕ ಇಂಜಿನಿಯರ್ಗಳಾದ ಹರಿಕೃಷ್ಣ, ಚಿದಾನಂದ,
ಕಿರಿಯ ಇಂಜಿನಿಯರ್ಗಳಾದ ಪ್ರಸಾದ್ ಕತ್ಲಡ್ಕ, ಲೋಕೇಶ್ ಎಣ್ಣೆಮಜಲು, ಬಾಲಕೃಷ್ಣ ಪಂಜ, ಅಭಿಷೇಕ್,ಮಹೇಶ್, ಮತ್ತಿತರರು ಉಪಸ್ಥಿತರಿದ್ದರು.