*ಗಣೇಶ್ ಮಾವಂಜಿ.
ಈ ನವೆಂಬರ್ ತಿಂಗಳು ಬಂತೆಂದರೆ ಎಲ್ಲೆಲ್ಲೂ ಕನ್ನಡದ ಕಂಪು ಪಸರಿಸುತ್ತದೆ. ಕಳೆದ ಬಾರಿಯ ಕನ್ನಡ ರಾಜ್ಯೋತ್ಸವದ ಬಳಿಕ ಮೂಲೆ ಸೇರುವ ಕನ್ನಡದ ಪ್ರೀತಿ, ಕನ್ನಡ ಬಾವುಟ, ಕನ್ನಡದ ಸೆಳೆತ, ಕನ್ನಡದ ಮೊರೆತ ಮತ್ತೆ ಭೋರ್ಗರೆಯುವುದು ಈ ಬಾರಿಯ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮಾತ್ರ. ಅಲ್ಲಿಯವರೆಗೆ ಗುಪ್ತವಾಗುವ ಕನ್ನಡ ಪ್ರೀತಿ ಇಂಗ್ಲಿಷ್ ವ್ಯಾಮೋಹದ ಸುನಾಮಿಯಲ್ಲಿ ಕೊಚ್ಚಿ ಹೋಗಿರುತ್ತದೆ.
ವೇದಿಕೆಯಲ್ಲಿ ಮಾಡುವ ಕನ್ನಡದ ಬಗೆಗಿನ ಭಾಷಣ, ಕನ್ನಡ ಬಳಕೆಯ
ಹಿಂದಿರುವ ಪ್ರಾಮುಖ್ಯತೆ, ನೆಲಜಲದ ಬಗ್ಗೆ ತೋರುವ ಪ್ರೀತಿ ಕೇವಲ ನವಂಬರ್ ತಿಂಗಳಿಗೆ ಮಾತ್ರ ಸೀಮಿತವಾಗುತ್ತಿರುವುದು ನಿಜಕ್ಕೂ ದುರಂತ. ಕನ್ನಡ ಶಾಲೆ, ಕನ್ನಡ ಭಾಷೆಯ ಬಗೆಗಿನ ನಿರ್ಲಕ್ಷ್ಯ ಧೋರಣೆ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತದೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೈಕ್ ಸಿಕ್ಕಾಗ ‘ಕರ್ನಾಟಕದ ನೆಲದಲ್ಲಿ ಕನ್ನಡದಲ್ಲೇ ಮಾತನಾಡುವಂತಾಗಬೇಕು.., ಸರಕಾರಿ ಕನ್ನಡ ಶಾಲೆಗೇ ಮಕ್ಕಳನ್ನು ಕಳುಹಿಸುವಂತಾಗಬೇಕು ಎಂದೆಲ್ಲಾ ಭಾಷಣ ಬಿಗಿಯುವ ಅದ್ಭುತ ಭಾಷಣಗಾರರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಿ ಅವರ ಠಸ್ ಪುಸ್ ಇಂಗ್ಲಿಷ್ ಭಾಷೆಗೆ ಪುಳಕಿತರಾಗುತ್ತಾರೆ. ಹಾಗಿದ್ದರೆ ಬಡವರ ಮಕ್ಕಳು ಮಾತ್ರ ಕನ್ನಡ ಕಲಿಯಲಿ., ಕನ್ನಡದಲ್ಲಿ ವ್ಯವಹರಿಸಲಿ. ನಮಗೆ ಅದರ ಅವಶ್ಯಕತೆ ಇಲ್ಲ ಎಂಬು ಧೋರಣೆಯೇ?
ಬಡವರು ಹಾಗೂ ಮಧ್ಯಮ ವರ್ಗದ ಮಂದಿಗೆ ಕನ್ನಡ ಭಾಷೆಯನ್ನು ಅವಗಣನೆ ಮಾಡಬೇಕೆಂಬ ದುರ್ಬುದ್ಧಿ ಖಂಡಿತವಾಗಿಯೂ ಇರುವುದಿಲ್ಲ. ಆದರೆ ತಮ್ಮ ಮಕ್ಕಳು ಕಲಿತು ಉದ್ಯೋಗ ಸಂಪಾದಿಸಲು ಇಂಗ್ಲಿಷ್ನ ಬಲ ಬೇಕೆಂಬ ಕಾರಣದಿಂದ ಅವರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಶಾಲೆಗೆ ಕಳುಹಿಸುವ ಅನಿವಾರ್ಯತೆ ಹೊಂದುತ್ತಾರೆ. ಇದರಲ್ಲಿ ತಪ್ಪೇನೂ ಕಾಣಿಸದು. ಏಕೆಂದರೆ ಆಳುವವರು ಇಂಗ್ಲಿಷ್ ಭಾಷೆಗೆ ಪ್ರಾಧಾನ್ಯತೆ ನೀಡಿ ಉದ್ಯೋಗ ನೀಡುವಲ್ಲಿ ಸುಲಲಿತವಾಗಿ ಇಂಗ್ಲಿಷ್ ಮಾತನಾಡುವವರಿಗೆ ಮಾತ್ರ ಪ್ರಾಶಸ್ತ್ಯ ನೀಡುತ್ತಾರೆಂದಾದರೆ ಯಾರು ತಾನೇ ಕನ್ನಡ ಮಾಧ್ಯಮ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವ ಭಂಡ ಧೈರ್ಯ ತಾಳುತ್ತಾರೆ?
ಅದೆಷ್ಟೋ ವರ್ಷಗಳವರೆಗೆ ನಮ್ಮನ್ನು ಆ ಇಂಗ್ಲಿಷರು ಆಳ್ವಿಕೆ ಮಾಡಿದ ಕಾರಣದಿಂದಲೋ ಏನೋ ಇಂಗ್ಲಿಷ್ ಭಾಷೆ ಮಾತನಾಡುವವರು ನಮಗೆದುರಾದರೆ ನಾವು ಅಚ್ಚರಿಯ ನೋಟ ಬೀರುತ್ತೇವೆ. ಅಂತವರ ಗಾಳಿ ಸೋಕಿದರಂತೂ ಅವರಿಂದ ಉದುರಿದ ಕೆಲವು ಇಂಗ್ಲಿಷ್ ಪದಗಳಾದ ಸೋ, ಬಟ್, ಆಕ್ಚುವಲಿ, ರಿಯಲಿ.., ಮುಂತಾದವುಗಳನ್ನು ನಮ್ಮ ಮಾತಿನಲ್ಲಿಯೂ ಸೇರಿಸಿಕೊಂಡು ಇಂಗ್ಲಿಷ್ ಬಾರದವರ ಕಣ್ಣಿನಲ್ಲಿ ‘ದೊಡ್ಡ ಜನ’ ಆಗಲು ಹವಣಿಸುತ್ತೇವೆ.

ಹಾಗೆ ನೋಡಿದರೆ ಕನ್ನಡ ಭಾಷೆಯ ಸಿನಿಮಾಗಳು ಕಿಂಚಿತ್ತಾದರೂ ಕನ್ನಡ ಉಳಿಸುವಲ್ಲಿ ಶ್ರಮಿಸುತ್ತಿವೆ ಎನ್ನಬಹುದು. ಇತ್ತಿಚೆಗಂತೂ ಕನ್ನಡ ಸಿನಿಮಾಗಳು ಬೇರೆ ಭಾಷೆಯ ಸಿನಿಮಾಗಳಿಗೆ ಸಡ್ಡು ಹೊಡೆದು ರಾಷ್ಟ್ರ ಮಟ್ಟದಲ್ಲೂ ಹೆಸರು ಮಾಡುವಷ್ಟು ಚೇತರಿಕೆ ಹೊಂದಿರುವ ಕಾರಣ ಕನ್ನಡ ಭಾಷೆ ಉಸಿರಾಡುವಂತಾಗಿರುವುದು ಸುಳ್ಳಲ್ಲ. ಹಾಗಿದ್ದರೂ ಕೆಲವರಿಗೆ ನಮ್ಮ ಕನ್ನಡ ಭಾಷೆಯ ಸಿನಿಮಾಗಳನ್ನು ವೀಕ್ಷಿಸುವುದೆಂದರೆ ಅಲರ್ಜಿ. ಭಾಷೆ ಅರ್ಥವಾಗದಿದ್ದರೂ ಇತರ ಭಾಷೆಯ ಸಿನಿಮಾಗಳನ್ನು ನೋಡಿಕೊಂಡು ಕನ್ನಡ ಭಾಷೆಯ ಸಿನಿಮಾಗಳನ್ನು ಹೀಗಳೆಯದಿದ್ದರೆ ಅಂತವರಿಗೆ ತಿಂದ ಅನ್ನ ಜೀರ್ಣವಾಗುವುದೇ ಇಲ್ಲವೆಂದು ತೋರುತ್ತದೆ.
ಅದೇಕೋ ಗೊತ್ತಿಲ್ಲ. ನಮಗೆ ನಮ್ಮ ಭಾಷೆಯ ಬಗ್ಗೆ ಕೀಳರಿಮೆಯೋ ಅಥವಾ ಬೇರೆ ಭಾಷೆಗಳ ಬಗ್ಗೆ ಮಮಕಾರವೋ ಅರ್ಥವಾಗುವುದಿಲ್ಲ. ಅನ್ಯ ರಾಜ್ಯದ ಯಾರಾದರೂ ನಮ್ಮೂರಿಗೆ ಕಾಲಿಟ್ಟರೆ ನಾವು ಕಷ್ಟಪಟ್ಟಾದರೂ ಅವರ ಭಾಷೆ ಮಾತನಾಡಲು ಪ್ರಯತ್ನಿಸುತ್ತೇವೆ.
ಒಂದೆರಡು ದಿನಗಳಷ್ಟೇ ಇದ್ದು ಹೋಗಲು ಬಂದವರಾದರೆ ಅವರೊಂದಿಗೆ ವ್ಯವಹರಿಸಲು ಅವರ ಭಾಷೆಯಲ್ಲಿ ಮಾತನಾಡುವುದು ತಪ್ಪಲ್ಲ. ಆದರೆ ಇಲ್ಲೇ ಹೊದ್ದು ಮಲಗಲು ಬಂದವರೊಂದಿಗೂ ನಾವು ನಮ್ಮ ಭಾಷೆ ಮಾತನಾಡದೆ ಅವರ ಭಾಷೆಯಲ್ಲಿ ವ್ಯವಹರಿಸುವುದು ಎಷ್ಟು ಸರಿ?
ಉದಾಹರಣೆಗೆ ಕೇರಳದ ಮಲಯಾಳಂ ಭಾಷಿಕರು ಉದ್ಯೋಗಕ್ಕಾಗಿ, ವಿದ್ಯಾಭ್ಯಾಸಕ್ಕಾಗಿ ನಮ್ಮ ನೆಲದ ಆಶ್ರಯ ಪಡೆದರೂ ಹೆಚ್ಚಿನವರು ಕನ್ನಡ ಕಲಿಯುವ ಇರಾದೆ ಹೊಂದಿರುವುದಿಲ್ಲ. ಬದಲಾಗಿ ಮಲಯಾಳಂ ಭಾಷೆಯಲ್ಲೇ ವ್ಯವಹರಿಸಲು ನೋಡುತ್ತಾರೆ. ಆರಂಭದ ಕೆಲ ದಿನಗಳಲ್ಲಿ ಇದನ್ನು ಸಹಿಸಿಕೊಳ್ಳಬಹುದಾದರೂ ದಶಕಗಳ ಕಾಲ ಇಲ್ಲಿ ಆಶ್ರಯ ಪಡೆಯುತ್ತಿರುವವರೂ ಕನ್ನಡ ಕಲಿಯಲು ಉತ್ಸುಕತೆ ತೋರುತ್ತಿಲ್ಲ ಎಂದಾದರೆ ಅವರಿಗೆ ಅವರ ಭಾಷೆಯ ಬಗ್ಗೆ ಇರುವ ಪ್ರೀತಿಯ ಆಳವನ್ನು ನಾವು ಕಂಡುಕೊಳ್ಳಬಹುದು. ಕರ್ನಾಟಕಕ್ಕೆ ಹೋದರೆ ಕನ್ನಡ ಭಾಷೆ ಕಲಿತರೆ ಮಾತ್ರ ಅಲ್ಲಿ ವ್ಯವಹರಿಸಲು ಸಾಧ್ಯ., ಇಲ್ಲವಾದಲ್ಲಿ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಬೇಕಾದರೆ ಅನ್ಯ ಭಾಷಿಕರು ನಮ್ಮ ನೆಲಕ್ಕೆ ಕಾಲಿಟ್ಟಾಗ ನಾವು ಕನ್ನಡದಲ್ಲೇ ಮಾತನಾಡಿ, ಕನ್ನಡದಲ್ಲೇ ವ್ಯವಹರಿಸುವಂತಾಗಬೇಕು.
ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಿನಿಮಾಗಳಷ್ಟೇ ಪ್ರಭಾವಶಾಲಿಯಾಗಿ ಕನ್ನಡ ಪತ್ರಿಕೆಗಳು, ಕಥೆ, ಕಾದಂಬರಿಗಳು ಕಾರ್ಯನಿರ್ವಹಿಸಬಹುದಾದರೂ ಈ ತಾಂತ್ರಿಕ ಯುಗದಲ್ಲಿ ಓದುಗರ ಸಂಖ್ಯೆ ಗಣನೀಯವಾಗಿ ಕೆಳಗಿಳಿಯುತ್ತಿರುವುದು ಸುಳ್ಳಲ್ಲ. ಹಿಂದೆಲ್ಲಾ ಕನ್ನಡ ಕಾದಂಬರಿಗಳನ್ನು ಕೊಂಡು ಓದುವವರ ಸಂಖ್ಯೆ ಬಹಳಷ್ಟಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಮನೋರಂಜನೆಗೆಂದು ಹತ್ತು ಹಲವು ವೇದಿಕೆಗಳು ಸೃಷ್ಟಿಯಾಗಿರುವುದರಿಂದ ಜನರ ಅಭಿರುಚಿ ಅತ್ತಕಡೆ ಚಾಚಿಕೊಂಡಿದೆ. ಹಾಗಾಗಿ ಬರಹಗಳ ಬಲ ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ತುಸು ಕ್ಷೀಣವಾಗಿರುವುದರಿಂದ ಅವುಗಳನ್ನು ನೆಚ್ಚಿಕೊಂಡು ಯಶಸ್ಸು ದಕ್ಕಿಸಿಕೊಳ್ಳುವುದು ದೂರದ ಮಾತು.
ಮೇಲೆ ಉಲ್ಲೇಖಿಸಿದ ಎಲ್ಲಾ ವಿಷಯಗಳನ್ನು ಕೇವಲ ನವಂಬರ್ ತಿಂಗಳು ಮಾತ್ರವಲ್ಲದೆ ಇತರ ದಿನಗಳಲ್ಲೂ ಯೋಚಿಸಿ ಯಾವುದರ ಸಖ್ಯ ಬೆಳೆಸಿದರೆ ಉತ್ತಮವೆಂದು ತರ್ಕಿಸಿ ಮುಂದುವರಿದರೆ ಕನ್ನಡ ಭಾಷೆಯನ್ನು ನಿರೀಕ್ಷಿತ ಮಟ್ಟದಲ್ಲಿ ಬೆಳೆಸಬಹುದು. ಅನ್ಯ ರಾಜ್ಯದ ಅನ್ಯ ಭಾಷಿಕರು ಬಂದಾಗ ಕನ್ನಡದಲ್ಲೇ ಸಂವಹನ ನಡೆಸಿದರೆ, ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳಿಗೆ ಉದ್ಯೋಗದಲ್ಲಿ ಭರಪೂರ ಅವಕಾಶ ಒದಗುವಂತಾದರೆ, ವೇದಿಕೆಯ ಭಾಷಣದಲ್ಲಿ ಮೊಳಗಿದ ಮಾರ್ಗೋಪಾಯಗಳು ವೇದಿಕೆಯಾಚೆಯೂ ಬಳಕೆಯಾಗುವಂತಾದರೆ, ಕನ್ನಡ ಸಾಹಿತ್ಯದತ್ತ ಯುವಜನಾಂಗದ ಚಿತ್ತ ಆಕರ್ಷಿಸುವಂತಾದರೆ, ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಕಡಿವಾಣ ಬಿದ್ದರೆ, ಕನ್ನಡ ಸಿನಿಮಾಗಳನ್ನು ನೋಡುವ ವೀಕ್ಷಕರ ಸಂಖ್ಯೆ ವೃದ್ಧಿಸಿದರೆ ಖಂಡಿತವಾಗಿಯೂ ಕನ್ನಡ ಭಾಷೆಗೆ ಉಜ್ವಲ ಭವಿಷ್ಯವಿದೆ ಎಂಬುದನ್ನು ಒಪ್ಪಿಕೊಳ್ಳಬಹುದು.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಅಂಕಣಕಾರರು)















