ಸುಳ್ಯ:ನಮ್ಮ ಹಿರಿಯರು ಹಲಸು, ಮಾವುಗಳಂತಹಾ ಪ್ರಾಕೃತಿಕ ಆಹಾರವನ್ನು ಹೆಚ್ಚಾಗಿ ತಿನ್ನುತ್ತಿದ್ದರು, ಆದುದರಿಂದಲೇ ಅವರ ಆರೋಗ್ಯ ಚೆನ್ನಾಗಿತ್ತು. ಹಲಸು-ಮಾವು ಮೇಳದ ಮೂಲಕ ಹಲಸು, ಮಾವು ಮತ್ತಿತರ ಪ್ರಾಕೃತಿಕ ವಸ್ತುಗಳ ಮಹತ್ವವನ್ನು ಹೊಸ ತಲೆಮಾರಿಗೆ ತಿಳಿಸಲು ಹಲಸು,ಮಾವು ಮೇಳದಿಂದ ಸಾಧ್ಯವಾಗಿದೆ ಎಂದು
ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.ಟೀಮ್ ಉಬಾರ್, ಸುಳ್ಯ ರೈತ ಉತ್ಪಾದಕ ಕಂಪೆನಿ ಸುಳ್ಯ, ಪ್ರಣವ ಸೌಹಾರ್ದ ಸಹಕಾರಿ ಸಂಘ ಮತ್ತು ಸುದ್ದಿ ಕೃಷಿ ಅರಿವು ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಸ್ಥಳೀಯ ತಾಲೂಕು ಆಡಳಿತ,ತಾಲೂಕು ಪಂಚಾಯತ್, ಕೃಷಿ ಸಂಬಂಧಿತ ಸರಕಾರಿ ಇಲಾಖೆಗಳು ಹಾಗೂ ಸಹಕಾರಿ ಸಂಘಗಳು, ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ

ನಡೆದ ಹಲಸು ಮತ್ತು ಮಾವು ಮೇಳದ ಸಮಾರೋಪ ಸಮಾರಂಭದಲ್ಲಿ ಸಾಧಕ ರೈತರನ್ನು ಸನ್ಮಾನಿಸಿ ಅವರು ಮಾತನಾಡಿದರು. ಹಲಸು
ಮತ್ತು
ಮಾವು ಮೇಳದ ಅಧ್ಯಕ್ಷರು ಹಾಗು ಸುಳ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರಾಜ್ಯ ರೈತ ರತ್ನ ಪ್ರಶಸ್ತಿ ಪುರಸ್ಕೃತ ಅಶೋಕ ಕುಮಾರ್ ಕೆ.ಎಸ್., ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ.ಕುಸುಮಾಧರ,ಮಾವು ಮೇಳ ಸಮಿತಿಯ ಗೌರವಾಧ್ಯಕ್ಷ, ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಪ್ರಸಾದ್
ಭಾಗವಹಿಸಿದ್ದರು.
ಮೇಳದಲ್ಲಿ ಹಲಸು ಮತ್ತು ಮಾವು ಕೃಷಿ ಸಾಧಕರಾದ ಸುಬ್ರಾಯ ಭಟ್ ಮಾಪಲತೋಟ, ಕುಮುದಾ ಲಕ್ಷೀಶ ಗಬ್ಬಲಡ್ಕ, ಹಾಗು ಲಕ್ಷ್ಮೀಶ ಗಬ್ಬಲಡ್ಕ, ಗೋವಿಂದ ಭಟ್ ಉಬರಡ್ಕ, ಸುಜಾತ ಭಾಸ್ಕರ ಕಂಬಳಿಮೂಲೆ ಮತ್ತು ನಮಾಮಿ ಬಳಗ ಸುಳ್ಯ ಇವರನ್ನು ಸನ್ಮಾನಿಸಲಾಯಿತು. ಇದರೊಂದಿಗೆ ವಿವಿಧ ಕೃಷಿ ಸಾಧಕರ ಸಾಕ್ಷ್ಯ ಚಿತ್ರ ಪ್ರದರ್ಶನ ಹಾಗೂ ಅವರಿಗೆ ಗೌರವಾರ್ಪಣೆ ನಡೆಯಿತು.
ಮೇಳದ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯರಾಮ ಮುಂಡೋಳಿಮೂಲೆ, ಪ್ರಣವ ಸೌಹಾರ್ದ ಸಹಕಾರಿ ಸಂಘದ ಸುಳ್ಯ ಶಾಖಾ ವ್ಯವಸ್ಥಾಪಕ ರಂಜಿತ್ ಅಡ್ತಲೆ, ಟೀಂ ಉಬಾರ್ನ ರಾಕೇಶ್ ಪ್ರಭು, ಮೇಳದ ಪದಾಧಿಕಾರಿಗಳಾದ ಎಂ.ಎಸ್.ಶ್ರೀಶ, ಯಶ್ವಿತ್ ಕಾಳಂಮನೆ, ಮಧುರ ಎಂ.ಆರ್.ಮತ್ತಿತರರು ಉಪಸ್ಥಿತರಿದ್ದರು.

ಮೇಳದ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎನ್.ಎ.ಜ್ಞಾನೇಶ್
ಸ್ವಾಗತಿಸಿದರು.ಪ್ರಚಾರ ಸಮಿತಿಯ ಸಂಚಾಲಕ ಹರೀಶ್ ಬಂಟ್ವಾಳ್ ಸನ್ಮಾನಿತರ ಪರಿಚಯ ಮಾಡಿದರು. ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಮೂರು ದಿನಗಳ ಕಾಲ ನಡೆದ ಹಲಸು ಮಾವು ಮೇಳದಲ್ಲಿ ಸುಮಾರು 75ಕ್ಕಿಂತಲೂ ಹೆಚ್ಚು ಸ್ಟಾಲ್ಗಳಿದ್ದವು. ವಿವಿಧ ಬಗೆಯ ಹಲಸು ಮಾವು ಇತರ ತಾಜಾ ಹಣ್ಣುಗಳ ಸ್ಟಾಲ್ಗಳು, ಹಲಸಿನ ಉಪ ಉತ್ಪನ್ನಗಳು, ಸ್ಥಳದಲ್ಲಿ ತಯಾರಿಸಿಕೊಡುವ ಹಲಸಿನ, ಮಾವಿನ ಬಗೆ ಬಗೆಯ

ತಿಂಡಿಗಳು, ವಿವಿಧ ನರ್ಸರಿಗಳಲ್ಲಿ ಎಲ್ಲಾ ಜಾತಿಯ ಗಿಡಗಳು ಇತ್ತು. ಹಲಸಿನ ಕಸಿ ಕಟ್ಟಿ ನೀಡುವುದು ವಿಶೇಷವಾಗಿತ್ತು. ಇದರೊಂದಿಗೆ ರೈತರ ಸ್ಥಳೀಯ ಉತ್ಪನ್ನಗಳು, ಬಟ್ಟೆಗಳು, ಆಟಿಕೆಗಳು, ಔಷಧಿಗಳು ಕೃಷಿ ಪೂರಕ ಮಳಿಗೆಗಳು ಜನಾಕರ್ಷಣೆಯ ಕೇಂದ್ರವಾಗಿತ್ತು.ಹಲವು ವಿಚಾರ ಸಂಕಿರಣಗಳು, ನಡೆಯಿತು. ಮಹಿಳೆಯರಿಗಾಗಿ ಹಲಸು, ಮಾವು, ಗೇರು ಉತ್ಪನ್ನಗಳ ಅಡುಗೆ ಸ್ಪರ್ಧೆ ನಡೆಯಿತು.ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡಿತು.














