ಸುಳ್ಯ:ಹಲಸು ಮಾವು ಮೇಳಕ್ಕೆ ಸುಳ್ಯದಲ್ಲಿ ಅದ್ದೂರಿ ಚಾಲನೆ ನೀಡಲಾಗಿದೆ.ಟೀಮ್ ಉಬಾರ್, ಸುಳ್ಯ ರೈತ ಉತ್ಪಾದಕ ಕಂಪೆನಿ ಸುಳ್ಯ, ಪ್ರಣವ ಸೌಹಾರ್ದ ಸಹಕಾರಿ ಸಂಘ ಮತ್ತು ಸುದ್ದಿ ಕೃಷಿ ಅರಿವು ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಸ್ಥಳೀಯ ತಾಲೂಕು ಆಡಳಿತ,ತಾಲೂಕು ಪಂಚಾಯತ್, ಕೃಷಿ ಸಂಬಂಧಿತ ಸರಕಾರಿ ಇಲಾಖೆಗಳು ಹಾಗೂ ಸಹಕಾರಿ ಸಂಘಗಳು, ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸುಳ್ಯದಲ್ಲಿ
ಪ್ರಪ್ರಥಮ ಬಾರಿಗೆ 3 ದಿನಗಳ ಹಲಸು ಮತ್ತು ಮಾವು ಮೇಳವನ್ನು ಸುಳ್ಯದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದ ವಠಾರದಲ್ಲಿ ಏರ್ಪಡಿಸಲಾಗಿದೆ. ಹಲಸು ಮಾವು ಮೇಳವನ್ನು ಉದ್ಘಾಟಿಸಿದ ಸುದ್ದಿ ಮಾಧ್ಯಮ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಹಾಗೂ ಹಲಸು ಮಾವು ಮೇಳದ ಗೌರವ ಮಾರ್ಗದರ್ಶಕ ಡಾ.ಯು.ಪಿ ಶಿವಾನಂದ ಮಾತನಾಡಿ ಕೃಷಿಯ ಮೌಲ್ಯವರ್ಧನೆ ಮಾಡಿಕೊಳ್ಳುವ ಮೂಲಕ ಕೃಷಿಕರ ಬದುಕನ್ನು ಮೌಲ್ಯವರ್ಧನೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಬದುಕು ಗಟ್ಟಿಯಾಗಲು ಆರ್ಥಿಕ ಸ್ವಾವಲಂಬನೆ ಬೇಕು, ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಬೇಕು.ಅದಕ್ಕಾಗಿ ಕೃಷಿ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಮೌಲ್ಯವರ್ಧನೆಯಾಗಬೇಕು ಎಂದು ಹೇಳಿದರು.
ಹಲಸು ಮಾವು ಮೇಳದ ಸ್ಟಾಲ್ಗಳನ್ನು ಉದ್ಘಾಟಿಸಿದ ತಹಶೀಲ್ದಾರ್ ಮಂಜುಳಾ ಎಂ. ಮಾತನಾಡಿ ಕೃಷಿಯು ಇಂದು ಸುಸ್ಥಿರವಾಗಿ ಮುಂದುವರಿದು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಆಗಿದೆ ಎಂದು ಹೇಳಿದರು. ಕೃಷಿಕರು ಎಲ್ಲಾ ಸವಾಲುಗಳನ್ನು ಎದುರಿಸಿ ಮುಂದುವರಿದ ಕಾರಣ ಮತ್ತು ಸರಕಾರದ ಪ್ರೋತ್ಸಾಹದಿಂದ ಕೃಷಿ ಇಂದು ಉತ್ತಮ ಉದ್ಯೋಗ ಮತ್ತು ಜಾಗತಿಕ ಸ್ಥಾನಮಾನ ಗಳಿಸಲು ಸಾಧ್ಯವಾಗಿದೆ ಎಂದರು.

ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಮಾತನಾಡಿ ಹಲಸು ಬೆಳೆಗೆ ಸುವರ್ಣ ದಿನಗಳು ಬರಲಿದೆ. ಹಳ್ಳಿ ಹಳ್ಳಿಗೂ ಹಲಸು ಆದಾಯ ತಂದು ಕೊಡಲಿದೆ ಎಂದರು. ಹಲಸು ಮುಂದಿನ ದಿನಗಳಲ್ಲಿ ಟ್ರೆಂಡ್ ಆಗಲಿದೆ ಎಂದ ಅವರು ಭಾರತದಲ್ಲಿ ಹಲಸು ಸಂಶೋಧನಾ ಕೇಂದ್ರ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಹಲಸು ಮಾವು ಮೇಳ ಸಮಿತಿಯ ಗೌರವಾಧ್ಯಕ್ಷ, ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸಿಇಒ ಜ್ಯೋತಿರಾಜ್,ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್ ಸಿ.ಎಂ,
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್,
ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಳ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಹಾಗೂ ಹಲಸು ಮಾವು ಮೇಳ ಸಂಘಟನಾ ಸಮಿತಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್
ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಯರಾಮ ಮುಂಡೋಳಿಮೂಲೆ ವಂದಿಸಿದರು. ಮೋಹಿನಿ ಸಂಪಾಜೆ(ನಿಷಾ) ಹಾಗು ಯಶ್ವತ್ ಕಾಳಂಮನೆ ಕಾರ್ಯಕ್ರಮ ನಿರೂಪಿಸಿದರು.














