*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಪ್ರತಿಯೊಂದು ಮನೆಯ ಹಿತ್ತಲಿನಲ್ಲಿಯೂ ಒಂದಾದರೂ ಬಾಳೆ ಗಿಡ ಇದ್ದೇ ಇರುತ್ತದೆ. ಅಡಿಕೆ, ತೆಂಗಿನ ತೋಟಗಳಲ್ಲಿ ನೂರಾರು, ಸಾವಿರಾರು ಬಾಳೆ ಗಿಡಗಳ ರಾಶಿಯೇ ಇರುತ್ತದೆ. ಗೊನೆ ಕಡಿದ ಮೇಲೆ ಈ ಬಾಳೆ ಕಡಿದು ಬಿಸಾಡಲಾಗುತ್ತದೆ. ಇಲ್ಲವೇ ಕರಗಿ ನಾಶವಾಗಿ ಹೋಗುತ್ತದೆ. ಅದೇ ಕಡಿದು ಬಿಸಾಡಿ ನಾಶವಾಗುವ ಬಾಳೆ ದಿಂಡಿನಿಂದಲೂ ಹತ್ತಾರು ಮೌಲ್ಯ ವರ್ಧಿತ ಉತ್ಪನ್ನಗಳನ್ನು ತಯಾರಿಸಬಹುದು ಎಂದರೆ ಆಶ್ಚರ್ಯಪಡಬೇಡಿ. ಆ ರೀತಿಯ ಸಾಧ್ಯತೆಗಳ ಲೋಕವನ್ನು
ಸುಳ್ಯ ತಾಲೂಕಿನ ಅರಂತೋಡಿನಲ್ಲಿ ತೆರೆಯಲಾಗಿದೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ.ಎಸ್, ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಸುಳ್ಯ ಇದರ ವತಿಯಿಂದ ಸಮಗ್ರ ಕೃಷಿ ಸಮುದಾಯ ಯೋಜನೆಯಡಿ ಅರಂತೋಡು ಪ್ರಕೃತಿ ವನಧನ ವಿಕಾಸ ಕೇಂದ್ರದಲ್ಲಿ

ಬಾಳೆ ದಿಂಡಿನ ನಾರು ತಯಾರಿಕಾ ಘಟಕವನ್ನು ಆರಂಭಿಸಲಾಗಿದೆ.
ಬಾಳೆ ದಂಡಿನ ನಾರಿನಿಂದ ಹಲವು ಮೌಲ್ಯ ವರ್ಧಿತ ಉತ್ಪನ್ನಗಳನ್ನು ತಯಾರಿಸುವ ನಿಟ್ಟಿನಲ್ಲಿ ಇಲ್ಲಿ ನಾರು ತೆಗೆಯುವ ಯಂತ್ರ,
ನೇಯ್ಗೆ ಯಂತ್ರ, ಹೊಲಿಗೆ ಯಂತ್ರವನ್ನು ಅಳವಡಿಸಲಾಗಿದೆ. ಬಾಳೆ ದಿಂಡಿನ ಜ್ಯೂಸ್ ತಯಾರಿಸುವ ಯಂತ್ರವನ್ನು ಅಳವಡಿಸಲಾಗಿದೆ.
ಏನೆಲ್ಲಾ ತಯಾರಿಸಬಹುದು.?
ಬಾಳೆ ದಿಂಡಿನಿಂದ ಹಲವಾರು ಉತ್ಪನ್ನಗಳನ್ನು ತಯಾರಿಸಬಹುದು. ಬಾಳೆ ದಿಂಡಿನ ನಾರು, ನೂಲು ತಯಾರಿಸಿ ಅದರಿಂದ ಚೀಲಗಳು, ಬ್ಯಾಗ್ಗಳು, ಚಾಪೆ, ಮ್ಯಾಟ್ಗಳು, ಬಾಸ್ಕೆಟ್ಗಳು, ಅಲಂಕಾರಿಕ ವಸ್ತುಗಳು, ಪ್ಲೇಟ್, ಕಪ್ಗಳು, ಅಲಂಕಾರಿಕ ವಸ್ತುಗಳು, ಕರಕುಶಲ ವಸ್ತುಗಳು ಸೇರಿ ಹತ್ತಾರು ಆಕರ್ಷಕ ವಸ್ತುಗಳನ್ನು ತಯಾರಿಸಬಹುದು. ಆರೋಗ್ಯ ಪೂರ್ಣವಾದ ಜ್ಯೂಸ್ ಹಾಗು ಪಾನೀಯ ತಯಾರಿಸಬಹುದು. ಅಲ್ಲದೆ

ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಜೈವಿಕ ಗೊಬ್ಬರ, ಪಶು ಆಹಾರ ತಯಾರಿಸಬಹುದು ಎಂದು ತಜ್ಞರು ಮಾಹಿತಿ ನೀಡಿದರು.
ಬಾಳೆ ದಿಂಡಿನಿಂದ ತಯಾರಿಸಲಾಗುವ ವಿವಿಧ ವಸ್ತುಗಳನ್ನು ಘಟಕದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿತ್ತು.
ತಯಾರಿಸುವುದು ಹೇಗೆ.?
ಕೊಯ್ಲಿನ ನಂತರ ಬಾಳೆ ಗಿಡದ ಕಾಂಡವನ್ನು ಸಂಗ್ರಹಿಸಲಾಗುತ್ತದೆ. ಹೊರಗಿನ ಪದರಗಳನ್ನು ತೆಗೆದು ಯಂತ್ರದ ಮೂಲಕ ನಾರನ್ನು ಬೇರ್ಪಡಿಸಲಾಗುತ್ತದೆ. ನಾರನ್ನು ಸಂಪೂರ್ಣ ತೊಳೆದು ಒಣಗಿಸಲಾಗುತ್ತದೆ. ಬಳಿಕ ಮೃದುವಾದ ಬಲಿಷ್ಠ ಮತ್ತು ನೈಸರ್ಗಿಕ ಬಾಳೆ ನಾರನ್ನು ಬಳಸಿ ವಿವಿಧ ವಸ್ತುಗಳನ್ನು ತಯಾರಿಸಲಾಗುತ್ತದೆ.
‘ತ್ಯಾಜ್ಯವಾಗಿ ನಷ್ಟವಾಗುವ ಬಾಳೆ ದಿಂಡಿನ ಮೌಲ್ಯವರ್ಧಿತ ಉತ್ಪನ್ನ ತಯಾರಿಸಿ ಹೆಚ್ಚುವರಿ ಆದಾಯ ಗಳಿಸುವುದು ಘಟಕದ ಉದ್ದೇಶ.
ಪರಿಸರ ಸ್ನೇಹಿ ವಸ್ತುಗಳನ್ನು ತಯಾರಿಸುವ ಮೂಲಕ ಘಟಕದ ಮೂಲಕ ಗ್ರಾಮೀಣ ಉದ್ಯೋಗ ಸೃಷ್ಠಿ ಮತ್ತು ಮಹಿಳಾ ಸ್ವಸಹಾಯಕ್ಕೆ ಉತ್ತಮ ಅವಕಾವಾಗಲಿದೆ.
-ರಾಜಣ್ಣ
ಕಾರ್ಯನಿರ್ವಾಹಕ ಅಧಿಕಾರಿ.
ತಾ.ಪಂ.ಸುಳ್ಯ.














