ಸುಳ್ಯ: ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರು ಅಂಜನಾದ್ರಿ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಕ್ಷೇತ್ರದಲ್ಲಿ ಕಾಲಾವಧಿ ಜಾತ್ರೋತ್ಸವದ ಅಂಗವಾಗಿ ಹನುಮ ನೇಮೋತ್ಸವ ನಡೆಯಿತು. ಅತ್ಯಂತ ಅಪರೂಪವಾಗಿ ಕಂಡು ಬರುವ ಹನುಮ ನೇಮೋತ್ಸವದಲ್ಲಿ ಕೋಲ ರೂಪದಲ್ಲಿ ಅವತರಿಸಿದ ಆಂಜನೇಯ ನೆರೆದ ಭಕ್ತರನ್ನು ಹರಸಿತು. ಮೈಯೆಲ್ಲ ಕಪ್ಪು ಬಣ್ಣ, ಅದರ ಮಧ್ಯೆ ಬಿಳಿ ಚುಕ್ಕೆ, ಬಿಳಿ ಪಂಚೆ ಸುತ್ತಿ ಕೈಗೆ ಮತ್ತು
ಕಾಲಿಗೆ ಗೆಜ್ಜೆ ಕಟ್ಟಿ ಕ್ಷೇತ್ರಾಂಗಣದಲ್ಲಿ ಪ್ರತ್ಯಕ್ಷನಾಗುವ ಹನುಮ ದೈವವು ಚೆಂಡೆಯ ಮತ್ತು ವಾದ್ಯದ ತಾಳಕ್ಕೆ ಹೆಜ್ಜೆ ಹಾಕಿ ದೇವಸ್ಥಾನದ ಸುತ್ತಲೂ ನರ್ತನ ಮಾಡುತ್ತಾ ನೆರೆದ ಭಕ್ತರನ್ನು ಹರಸಿತು. ದೇವಸ್ಥಾನದ ಸಮೀಪದ ಕಾಡಿನಿಂದ ಕೋಲ ಕಟ್ಟಿ ದೇವಸ್ಥಾನದ ಅಂಗಣಕ್ಕೆ ಕರೆ ತರಲಾಗುತ್ತದೆ.
ಜಿಲ್ಲೆಯಲ್ಲಿಯೇ ಅತ್ಯಂತ ಅಪರೂಪವಾಗಿ ಹನುಮ ನೇಮೋತ್ಸವ ನಡೆಯುತ್ತದೆ. ಅಂಜನಾದ್ರಿ ಆಂಜನೇಯ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆದ ಬಳಿಕ ಪ್ರತಿ ವರ್ಷ ಜಾತ್ರೋತ್ಸವ ಸಂದರ್ಭದಲ್ಲಿ ಹನುಮ ನೇಮೋತ್ಸವ ನಡೆಯುತ್ತದೆ. ಕೇರಳ ಮತ್ತು ಕರ್ನಾಟಕದ ವಿವಿಧ

ಭಾಗಗಳಿಂದ ಸಾವಿರಾರು ಮಂದಿ ಹನುಮ ನೇಮೋತ್ಸವ ವೀಕ್ಷಿಸಿ ಧನ್ಯತೆ ಪಡೆದರು.ಬಳಿಕ ಗುಳಿಗ ದೈವದ ಕೋಲ ನಡೆಯಿತು.ಫೆ.27ರಂದು
ಶ್ರೀ ಗುಳಿಗರಾಜ ಸನ್ನಿಧಿಯಲ್ಲಿ ದೇವಕ್ರಿಯಾ ತಂಬಿಲ ಸೇವೆ, ಶ್ರೀ ದೇವರಿಗೆ ಮಹಾಪೂಜೆ, ಬ್ರಹ್ಮಸಂತರ್ಪಣೆ, ನಡೆದು ಅಪರಾಹ್ನ ಇಳಂತಾಜೆ ತರವಾಡಿನಲ್ಲಿ ವೀಳ್ಯ ನೀಡಿ ಹನುಮ ದೈವದ ಭಂಡಾರ ತರಲಾಯಿತು.ರಾತ್ರಿ ಗುಳಿಗರಾಜ ದೈವದ ಭಂಡಾರ ತೆಗೆದು ಶ್ರೀ ಆಂಜನೇಯ ಸ್ವಾಮಿಯ ಅಂಗಣಪ್ರವೇಶವಾಗಿ ಶ್ರೀ ಹನುಮ ನೇಮೋತ್ಸವ ನಡೆಯಿತು. ಬಳಿಕ ಗುಳಿಗರಾಜ ದೈವದ ಕೋಲ ಸಂಪನ್ನಗೊಂಡಿತು.

ಅಂಜನಾದ್ರಿಯ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದಲ್ಲಿ ಕಾಲಾವದಿ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ವೇದ ಮೂರ್ತಿ ಪುರೋಹಿತ ನಾಗರಾಜ ಭಟ್ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಫೆ.27ರಂದು ರಾತ್ರಿ ಶ್ರೀ ದೇವರಿಗೆ ಅಲಂಕಾರ ಪೂಜೆ ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಭೂತಬಲಿ, ಕಟ್ಟೆಪೂಜೆ, ದರ್ಶನಬಲಿ, ದೈವ – ದೇವರ ಭೇಟಿ, ಬಟ್ಟಲುಕಾಣಿಕೆ, ಶ್ರೀಮುಡಿ ಗಂಧಪ್ರಸಾದ ವಿತರಣೆ ನಡೆಯಿತು.
