ಸುಳ್ಯ:ಮೂರು ತಿಂಗಳಿನಿಂದ ಸಂಬಳ ದೊರೆಯದ ಹಿನ್ನಲೆಯಲ್ಲಿ ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಡಿಗ್ರೂಪ್ ನೌಕರರು ಮುಷ್ಕರ
ಹೂಡಿರುವ ಹಿನ್ನಲೆಯಲ್ಲಿ ಆಸ್ಪತ್ರೆಯ ದೈನಂದಿನ ಕೆಲಸ ಕಾರ್ಯಗಳು ತಾಳ ತಪ್ಪಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮಾಲಕರ ಸಂಘದ ಸದಸ್ಯರು ಆಸ್ಪತ್ರೆಯಲ್ಲಿ ಡಿಗ್ರೂಪ್ ನೌಕರರ ಸೇವೆಯನ್ನು ನಡೆಸಲು ಮುಂದಾಗಿದ್ದಾರೆ. ಭಾನುವಾರ ಮಧ್ಯಾಹ್ನದಿಂದ ಹಗಲು ಹಾಗೂ
ರಾತ್ರಿ ಪಾಳಿಯಲ್ಲಿ ಸಂಘದ ಸದಸ್ಯರು ಉಚಿತ ಸೇವೆ ಸಲ್ಲಿಸುತ್ತಿದ್ದಾರೆ.
ಆಸ್ಪತ್ರೆಯ ಸ್ವಚ್ಚತೆ, ತುರ್ತು ಚಿಕಿತ್ಸೆ, ರೋಗಿಗಳನ್ನು ಆಸ್ಪತ್ರೆಯ ವಾರ್ಡ್ಗೆ ಕರೆದೊಯ್ಯುವುದು ಮತ್ತಿತರ ಕೆಲಸಗಳಿಗೆ ನೆರವು ನೀಡುತ್ತಿದ್ದಾರೆ. ಡಿಗ್ರೂಪ್ ನೌಕರರಿಗೆ ಕೂಡಲೇ ಸಂಬಳ ಪಾವತಿ ಮಾಡುವ ವ್ಯವಸ್ಥೆ ಆಗಬೇಕು. ಅವರ ಮುಷ್ಕರ ಮುಗಿಯುವ ತನಕ ಸೇವೆ ಸಲ್ಲಿಸುತ್ತೇವೆ, ಪೋಸ್ಟ್ಮಾರ್ಟಂ ಸೇರಿದಂತೆ ಎಲ್ಲಾ ಕೆಲಸ ಕಾರ್ಯಗಳನ್ನು ನಡೆಸಲು ಸಿದ್ಧ ಎಂದು ಆಂಬುಲೆನ್ಸ್ ಚಾಲಕ ಮಾಲಕರ ಸಂಘದ ಸದಸ್ಯರು ತಿಳಿಸಿದ್ದಾರೆ.

ಸಂಘದ ಗೌರವಾಧ್ಯಕ್ಷ ಶಿವಪ್ರಸಾದ್, ಅಧ್ಯಕ್ಷ ಶರತ್, ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಗೂನಡ್ಕ, ಪ್ರಮುಖರಾದ ತಾಜುದ್ದೀನ್ ಟರ್ಲಿ, ರಫೀಕ್, ಸೀತಾರಾಮ, ಕೇಶವಚಂದ್ರ, ಪೃಥ್ವಿರಾಜ್, ಬಾಲಸುಬ್ರಹ್ಮಣ್ಯ ಸೇರಿದಂತೆ ಸಂಘದ ಎಲ್ಲಾ ಸದಸ್ಯರು ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಡಿಗ್ರೂಪ್ ನೌಕರರಿಗೆ ಕೂಡಲೇ ಸಂಬಳ ನೀಡಲು

ಕ್ರಮ ಕೈಗೊಳ್ಳಬೇಕು ಎಂದು ಆಂಬುಲೆನ್ಸ್ ಮಾಲಕ ಚಾಲಕರ ಸಂಘದ ಸದಸ್ಯರು ತಿಳಿಸಿದ್ದಾರೆ.
ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 20 ಮಂದಿ ಡಿಗ್ರೂಪ್ ನೌಕರರಿಗೆ ಮಾರ್ಚ್, ಎಪ್ರಿಲ್, ಮೇ ತಿಂಗಳ ಸಂಬಳ ಬಂದಿಲ್ಲ. ಈ ಹಿನ್ನಲೆಯಲ್ಲಿ ಡಿಗ್ರೂಪ್ ನೌಕರರು ಗೈರು ಹಾಜರಾಗಿದ್ದಾರೆ.