ಎಡನೀರು: ಸನಾತನ ಹಿಂದೂ ಸಮಾಜದಲ್ಲಿ ಐಕ್ಯಮತ್ಯವೇ ಪ್ರಧಾನವೆಂದು ಹಿಂದೂ ಸಮಾಜದ ಪುನರ್ ಸಂಘಟನೆಗೆ ಅಡಿಗಲ್ಲು ಹಾಸಿದ ಆಚಾರ್ಯ ಶಂಕರ ಭಗವತ್ಪಾದರ ತತ್ವಾರ್ಥ ಚಿಂತನೆಯ ಹಾದಿಯಲ್ಲಿ ಸಮಾಜ ಐಕ್ಯಮತ್ಯದಿಂದ ನಡೆಯುವುದೇ ದೇಶದ ಪುನರ್ ಸಂಘಟನೆಗೆ ಕೊಡುಗೆಯಾಗಬೇಕು ಎಂದು
ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು, ಶ್ರೀ ವಿಧುಶೇಖರ ಭಾರತೀ ಶ್ರೀ ಪಾದಂಗಳವರು ನುಡಿದರು.ಅವರು ಕಾಸರಗೋಡು ಎಡನೀರು ಮಠದಲ್ಲಿ ಶ್ರೀಶಂಕರ ಭಗವತ್ಪಾದರ ಪಂಚಲೋಹ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿ ಅನುಗ್ರಹ ಭಾಷಣ ಮಾಡಿದರು.ಎಡನೀರು ಶ್ರೀಮಠದ ಪೀಠಾಧೀಶ ಶ್ರೀ ಸಚ್ಛಿದಾನಂದ ಭಾರತೀಶ ಉಪಸ್ಥಿತಿಯ ಗೌರವ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನಡೆಯಿತು.
ಪ್ರತಿ ಮನೆಯಲ್ಲೂ ಶಂಕರ ಜಯಂತಿ ಆಚರಣೆ ವರ್ಷಂಪ್ರತಿ ನಡೆಯಬೇಕು. ಪ್ರತಿಯೊಬ್ಬರೂ ಶಂಕರ ತತ್ವ ಚಿಂತನೆಯಂತೆ ಬದುಕಬೇಕು ಎಂದು ನುಡಿದ ಶೃಂಗೇರಿ ಶ್ರೀಗಳು ಶ್ರೀಶಂಕರ ಭಗವತ್ಪಾದರ ಪ್ರತಿಮೆ ಅದೇ ದಕ್ಷಿಣಾಮೂರ್ತಿ ಪೂಜಾರಾಧನೆಗಳಿಂದ ಸಂಪ್ರೀತಿ ಪಡೆವ ಎಡನೀರು ಮಠದಂಗಳದಲ್ಲಿ ಸ್ಥಾಪನೆಯಾಗುವುದೆಂದರೆ ಬ್ರಹ್ಮೖಕ್ಯ ಗುರುಗಳ ಕನಸು ಶಿಷ್ಯನ ಮೂಲಕ ಸಾಕಾರವಾಗಿದೆ ಎಂದರು.
ಎಡನೀರು ಮಠದಲ್ಲಿ ಬೆಳಿಗ್ಗೆ ಹವನಗಳು ನಡೆಯಿತು. ಬಳಿಕ

ಸಾಂಪ್ರದಾಯಿಕ ವಿಧಿಯಂತೆ ಮೂರೂವರೆ ಕಿಲೋ ತೂಕದ, ಸ್ವರ್ಣವರ್ಣ ಶೋಭಿತ ಶಂಕರಾಚಾರ್ಯ ಪ್ರತಿಮೆಗೆ ಕಲಶಾಭಿಷೇಕ ಸಹಿತ ಶಂಕರಪೂಜೆಯೊಂದಿಗೆ ಪ್ರತಿಮೆ ಅನಾವರಣ ನಡೆಯಿತು. ವೇದ ಮಂತ್ರಗಳ ಸಹಿತ ಶಂಕರ ಕೃತಿ ಆಲಾಪಗಳೊಂದಿಗೆ ಭಕ್ತಿ ಸಡಗರದಲ್ಲಿ ಪ್ರತಿಮೆ ಅನಾವರಣವಾಯಿತು.
ಬಳಿಕ ಪ್ರಧಾನ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಎಡನೀರು ಮಠದ ಶಂಕರ ತತ್ವ ಚಿಂತನಾ ಕೃತಿ ಪ್ರಕಾಶನದ ಲಾಂಛನ ಬಿಡುಗಡೆ ನಡೆಯಿತು. ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಂ ಭಟ್ ಸ್ವಾಗತಿಸಿದರು. ಪುತ್ತೂರಿನ ಸ್ವರ್ಣೋದ್ಯಮಿ ಜಿ. ಎಲ್. ಬಲರಾಮ ಆಚಾರ್ಯ ವಂದಿಸಿದರು. ವೇದ ವಿದ್ವಾನ್ ಹಿರಣ್ಯ ವೇಂಕಟೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.











