ಸುಳ್ಯ: ಆಟಿ ತಿಂಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಹಿತ ನೀಡುವ ಆಹಾರಗಳ ವೈವಿಧ್ಯತೆ ಸಾರಿದ ಆಟಿ ಕೂಟ ಬಾಯಿಗೆ ರುಚಿಯ ರಸದೌತಣವನ್ನು ನೀಡಿತು.ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್ಆರ್ಎಲ್ಎಂ),ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಇಲಾಖೆ- ಸಂಜೀವಿನಿ, ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ವತಿಯಿಂದ ಸುಳ್ಯ ತಾಲೂಕು
ಪಂಚಾಯತ್ ಸಭಾಂಗಣದಲ್ಲಿ ಆಟಿ ಕೂಟ ಏರ್ಪಡಿಸಲಾಗಿತ್ತು. ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯತ್ಗಳ ಸಂಜೀವಿನಿ ಒಕ್ಕೂಟದ ಸದಸ್ಯರು ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಿ ತಂದು ಉಣ ಬಡಿಸಿದರು. ತಲಾತಲಾಂತರಗಳಿಂದ ಆಟಿ ತಿಂಗಳಲ್ಲಿ ತಯಾರಿಸುವ ವಿಶಿಷ್ಠ ಖಾದ್ಯಗಳು, ತಿಂಡಿ ತಿನಿಸುಗಳನ್ನು ತಯಾರಿಸಿ ವಿತರಿಸಲಾಯಿತು. 25ಕ್ಕೂ ಹೆಚ್ಚು ವಿವಿಧ ಖಾದ್ಯಗಳು ರುಚಿಯ ವೈವಿಧ್ಯತೆ ಸಾರಿತು. ಆಟಿ ಸೊಪ್ಪು, ಹಲಸಿನ ಕಾಯಿ, ಹಲಸಿನ ಹಣ್ಣುಗಳ ವಿವಿಧ ಖಾದ್ಯಗಳನ್ನು
ತಯಾರಿಸಿ ತಂದಿದ್ದರು. ಹಲವು ರುಚಿಗಳನ್ನು ಒಂದೇ ತಟ್ಟೆಯಲ್ಲಿ ಸವಿದ ವಿಶಿಷ್ಠ ಅನುಭವ ನೀಡಿತು. ಆಟಿ ಪಾಯಸ, ಆಟಿ ಸೊಪ್ಪಿನ ಶೀರ, ನನ್ನೇರಿ, ತಜಂಕ್ ಪಲ್ಯ, ಮೆಂತೆ ಪಾಯಸ, ಹಲಸಿನ ಹಣ್ಣಿನ ಬರ್ಫಿ, ಬಾಳೆಕಾಯಿ ಚಿಪ್ಸ್, ಹಲಸಿನ ಬೀಜದ ಹೋಳಿಗೆ, ಹಲಸಿನ ಬೀಜದ ಚಿಪ್ಸ್, ಹಲವು ವಿಧದ ಪತ್ರೋಡೆ, ಕಪ್ಪು ಕೆಸುವಿನ ದಂಡು ಸಾಂಬಾರ್, ಬಾಳೆದಂಡು ಹೆಸರು ಕಾಳು ಪಲ್ಯ, ಹಲಸಿನ ಹಣ್ಣಿನ ಮೂಡೆ, ಕಣಲೆ ಸಾಂಬಾರ್, ಕಣಲೆ ಪಲ್ಯ, ಕಣಲೆ ಪತ್ರೋಡೆ, ಹಲಸಿನ ಬೀಜದ ಪಲ್ಲೋಡಿ, ಹಲಸಿನ ಬೀಜದ ವಡೆ, ಬಾಳೆದಿಂಡು ಪಲ್ಯ, ಒಂದೇಲಗ ಲೇಹ, ಔಷಧೀಯ ಸಸ್ಯಗಳ ಚಟ್ನಿ ಹೀಗೆ ಹತ್ತು ಹಲವು ವೈವಿಧ್ಯಮಯ ಸಾಂಪ್ರದಾಯಿಕ ತಿಂಡಿ ತಿನಿಸುಗಳು ಮನ ತಣಿಸಿತು.ಪ್ರತಿಯೊಂದು ಸಂಜೀವಿನಿ ಒಕ್ಕೂಟದ ಸದಸ್ಯರು ವೈವಿಧ್ಯಮಯ ತಿಂಡಿಗಳನ್ನು ತಯಾರು ಮಾಡಿ ತಂದಿದ್ದರು.
ಅಲ್ಲದೆ ಸಂಜೀವಿನಿ ಒಕ್ಕೂಟದ ಸದಸ್ಯರು ತಯಾರಿಸಿದ ವೈನ್, ಮೇಣದ ಬತ್ತಿ, ಉಪ್ಪಿನ ಕಾಯಿ, ಚಾಪೆ, ರೊಟ್ಟಿ, ಜೇನು ಮತ್ತಿತರ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಜಯರಾಮ್ ಆಟಿ ಕೂಟವನ್ನು ಉದ್ಘಾಟಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಮಾತನಾಡಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಗ್ರೇಡ್ 2 ತಹಶೀಲ್ದಾರ್ ಮಂಜುನಾಥ್ ಎಂ, ತಾಲೂಕು ಪಂಚಾಯತ್ ವ್ಯವಸ್ಥಾಪಕರಾದ ಹರೀಶ್, ತಾ.ಪಂ. ಸಹಾಯಕ ನಿರ್ದೇಶಕಿ ಸರೋಜಿನಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ವಲಯ ವ್ಯವಸ್ಥಾಪಕರಾದ ಮೇರಿ, ರೂಪ, ತಾಲೂಕು ವ್ಯವಸ್ಥಾಪಕಿ ಶ್ವೇಥಾ, ವಲಯ ಮೇಲ್ವಿಚಾರಕರಾರ ಮಹೇಶ್, ಅವಿನಾಶ್, ಶ್ರೀನಿಧಿ ಮತ್ತಿತರರು ಉಪಸ್ಥಿತರಿದ್ದರು. ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಆಟಿ ಖಾದ್ಯಗಳ ರುಚಿಯನ್ನು ಸವಿದರು.