ಎಜ್ಬಾಸ್ಟನ್: ನಾಯಕ ಶುಭಮನ್ ಗಿಲ್ ಇಂಗ್ಲೆಂಡ್ ಎದುರಿನ ಸತತ ಎರಡನೇ ಟೆಸ್ಟ್ನಲ್ಲಿ ಶತಕ ದಾಖಲಿಸುವ ಮೂಲಕ ಭಾರತ ಮೊದಲ ದಿನ ಉತ್ತಮ ಮೊತ್ತ ದಾಖಲಿಸಿದೆ. ಪಂದ್ಯದ ಮೊದಲ ದಿನದಾಟದ ಕೊನೆಗೆ ಭಾರತ 85 ಓವರ್ಗಳಲ್ಲಿ 5 ವಿಕೆಟ್ಗಳಿಗೆ 310 ರನ್ ಗಳಿಸಿತು. ಗಿಲ್ (ಬ್ಯಾಟಿಂಗ್ 114) ಮತ್ತುರವೀಂದ್ರ ಜಡೇಜ (ಬ್ಯಾಟಿಂಗ್ 41) ಕ್ರೀಸ್ನಲ್ಲಿದ್ದಾರೆ.ಮುರಿಯದ 6ನೇ ವಿಕೆಟ್ ಜೊತೆಯಾಟದಲ್ಲಿ
ಇವರು 99 ರನ್ ಸೇರಿಸಿದರು. ಗಿಲ್ 216 ಎಸೆತಗಳನ್ನು ಎದುರಿಸಿ
12 ಬೌಂಡರಿ ಬಾರಿಸಿದರು.ಇಂಗ್ಲೆಂಡ್ ವಿರುದ್ದ ಸತತ ಎರಡು ಟೆಸ್ಟ್ಗಳಲ್ಲಿ ಶತಕ ದಾಖಲಿಸಿದ ಭಾರತದ ಮೂರನೇ ಬ್ಯಾಟರ್ ಆದರು. ಈ ಹಿಂದೆ ವಿಜಯ್ ಹಜಾರೆ ಮತ್ತು ಮೊಹಮ್ಮದ್ ಅಜರುದ್ದೀನ್ ಈ ಸಾಧನೆ ಮಾಡಿದ್ದರು.ಟಾಸ್ ಗೆದ್ದ ಆತಿಥೇಯ ಇಂಗ್ಲೆಂಡ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಲೀಡ್ಸ್ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಯಶಸ್ವಿ ಈ ಪಂದ್ಯದಲ್ಲಿಯೂ ಮೂರಂಕಿಯತ್ತ ದಾಪುಗಾಲಿಟ್ಟಿದ್ದರು. ಆದರೆ ಅವರು 87 ರನ್ ಗಳಿಸಿ ಅವರು ನಿರ್ಗಮಿಸಿದರು.
ಜೈಸ್ವಾಲ್ ಜೊತೆಗೆ ಇನಿಂಗ್ಸ್ ಆರಂಭಿಸಿದ ಅನುಭವಿ ಕೆ.ಎಲ್. ರಾಹುಲ್ ಬೇಗನೇ ನಿರ್ಗಮಿಸಿದರು.ಕ್ರಮಾಂಕದಲ್ಲಿ ಬಡ್ತಿ ಪಡೆದ ಕರುಣ್ ನಾಯರ್ (31 ರನ್) ಅವರೊಂದಿಗೆ ಮೂರನೇ ವಿಕೆಟ್ ಜೊತೆಯಾಟದಲ್ಲಿ 80 ರನ್ ಸೇರಿಸಿದರು. ಕರುಣ್ ಔಟ್ ಆದ ಬಳಿಕ ನಾಯಕ ಗಿಲ್ ಜೊತೆಗೂಡಿದ ಜೈಸ್ವಾಲ್ ಮತ್ತೊಂದು ಉತ್ತಮ ಇನ್ನೀಂಗ್ಸ್ ಕಟ್ಟಿದರು.
ಐದು ಪಂದ್ಯಗಳ ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿಯಲ್ಲಿ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು 1-0 ಅಂತರದ ಮುನ್ನಡೆಯಲ್ಲಿದೆ.ಲೀಡ್ಸ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು.
ಮತ್ತೊಂದೆಡೆ ಭಾರತ ತಂಡದಲ್ಲಿ ಮೂರು ಬದಲಾವಣೆಗಳನ್ನು ತರಲಾಗಿದೆ. ಜಸ್ಪ್ರೀತ್ ಬೂಮ್ರಾಗೆ ವಿಶ್ರಾಂತಿ ಸೂಚಿಸಲಾಗಿದೆ. ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಹಾಗೂ ಆಕಾಶ್ ದೀಪ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.