ತಿರುವನಂತಪುರ: ದೇಶದ ಜಲ ಮಾರ್ಗದ ವ್ಯಾಪಾರಕ್ಕೆ ಹೆಚ್ಚಿನ ಬಲ ತುಂಬಲಿರುವ ತಿರುವನಂತಪುರದ ವಿಯಿಞಂ ಬಂದರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ‘ನವಯುಗದ ಅಭಿವೃದ್ಧಿಯ ಸಂಕೇತ’ ಎಂದು ಅವರು ಬಣ್ಣಿಸಿದರು. ಕೇರಳದಲ್ಲಿ ಬಹುಕಾಲದಿಂದ ಪೂರ್ಣಗೊಳ್ಳಲು ಬಾಕಿ ಉಳಿದಿದ್ದ ಈ
ಕನಸಿನ ಯೋಜನೆ ಇದೀಗ ಪೂರ್ಣಗೊಂಡಿದೆ. 8,800 ಕೋಟಿ ಮೊತ್ತದ ಈ ಯೋಜನೆಯು ಮುಂದಿನ ದಿನಗಳಲ್ಲಿ ದೇಶದ ಜಲ ಮಾರ್ಗದ ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ಹೇಳಿದರು.
ವಿಯಿಞಂ ಬಂದರು ಕೇರಳವನ್ನು ಜಾಗತಿಕ ಜಲ ಮಾರ್ಗದ ವ್ಯಾಪಾರದ ಪ್ರಮುಖ ಕೇಂದ್ರವನ್ನಾಗಿಸಲಿದೆ ಮತ್ತು ಭಾರತದ ಜಲ ಮಾರ್ಗದ ವ್ಯಾಪಾರ ವಲಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಬಂದರನ್ನು ಹೊಂದಿರುವ ನಗರಗಳು ವಿಕಸಿತ ಭಾರತದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಕಸಿತ ಕೇರಳ ನಿರ್ಮಾಣದಲ್ಲಿ ನಾವು ಜತೆಯಾಗಿ ಕೆಲಸ ಮಾಡೋಣ’ ಎಂದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ರಾಜೇಂದ್ರ ಅರ್ಲೇಕರ್, ಕೇಂದ್ರ ಸಚಿವರಾದ ಸರ್ಬಾನಂದ ಸೋನೋವಾಲ್, ಸುರೇಶ್ ಗೋಪಿ, ಜಾರ್ಜ್ ಕುರ್ಯನ್, ಕೇರಳ ಸಚಿವರಾದ ವಿ.ಎನ್.ವಾಸವನ್, ಸಜಿ ಚೆರಿಯಾನ್, ವಿ.ಶಿವನ್ ಕುಟ್ಟಿ, ಜಿ.ಆರ್.ಅನಿಲ್, ಕಾಂಗ್ರೆಸ್ ಸಂಸದರಾದ ಶಶಿ ತರೂರ್,ಅಡೂರ್ ಪ್ರಕಾಶ್, ಎಂ.ಎ.ರಹೀಂ, ಜಾನ್ ಬ್ರಿಟ್ಟಾಸ್,ಮೇಯರ್ ಆರ್ಯಾ ರಾಜೇಂದ್ರನ್, ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್, ಗೌತಂ ಅದಾನಿ ಮತ್ತಿತರರು ಇದ್ದರು.