ಸುಳ್ಯ : ಭಾರತ ಒಂದು ವಿಶೇಷವಾದ ದೇಶ. ಇಲ್ಲಿನ ಮರ, ಗಿಡ, ಪ್ರಕೃತಿ ದೇವರಂತೆ ಬದುಕುತ್ತಿವೆ. ಹಾಗಾಗಿ ಅವುಗಳಲ್ಲಿ ನಾವು ದೈವತ್ವವನ್ನು ಕಾಣುತ್ತೇವೆ. ಆದ್ದರಿಂದ ಈ ದೇಶ ದೇವಭೂಮಿ ಆಯಿತು. ಅಂತಹ ದೇವಭೂಮಿಯಲ್ಲಿ ಉಪೇಂದ್ರ ಕಾಮತರು ದೇವರಂತೆ ಬದುಕಿದರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಸೀತಾರಾಮ ಕೆದ್ಲಾಯರು ಹೇಳಿದರು.
ಅವರು ಶನಿವಾರ ಜಾಲ್ಸೂರಿನ ವಿನೋಬಾನಗರದಲ್ಲಿ ಹಿರಿಯ ಉದ್ಯಮಿ ದಿ. ಉಪೇಂದ್ರ ಕಾಮತ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪಟ್ಟಣದಿಂದ ಹಳ್ಳಿಗೆ ಬಂದು
ಉದ್ಯಮ ಸ್ಥಾಪಿಸುವ ಮೂಲಕ ನೂರಾರು ಜನರಿಗೆ ಬದುಕು ನೀಡಿದ ಕಾಮತರು ಮಾತು ಕಡಿಮೆ. ಹೆಚ್ಚು ದುಡಿಮೆ ಎಂಬಂತೆ ಬದುಕಿದರು.
ಪಟ್ಟಣ ಬಿಟ್ಟು ಈ ನೈಸರ್ಗಿಕ ಕಾಡಿನ ಮಧ್ಯೆ ಬಂದು ನೆಲೆಸಿ ತನಗಾಗಿ ಬದುಕದೇ, ಇನ್ನೊಬ್ಬರ ಹಸಿವು, ಬಾಯಾರಿಕೆ ನೀಗಿಸುವುದಕ್ಕಾಗಿ ಬದುಕಿದ ಉಪೇಂದ್ರ ಕಾಮತ್ ಅವರದ್ದು ದೇವರಂತಹ ಬದುಕಾಗಿದೆ. ನದಿ ಹರಿದು ಸಾಗರ ಸೇರಿ ಸಾಗರವೇ ಆದಂತೆ ಬದುಕಿದ ಅವರಿಗೆ ಸಾವೇ ಇಲ್ಲ ಎಂದು ಸೀತಾರಾಮ ಕೆದ್ಲಾಯರು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಎಸ್. ಅಂಗಾರ ಅವರು ಮಾತನಾಡಿ ಉಪೇಂದ್ರ ಕಾಮತ್ ಅವರು ಹೆಚ್ಚು ಮಾತನಾಡದೇ ಕೃತಿಯಲ್ಲೇ ಎಲ್ಲವನ್ನು ಮಾಡಿ ಇತರರಿಗೆ ಮಾರ್ಗದರ್ಶಕರಾದರು. ನನ್ನ ಬೆಳವಣಿಗೆಯಲ್ಲಿ ಕಾಮತರ ಪಾಲಿದೆ. ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿ ಪಕ್ಷಕ್ಕೆ ದೊಡ್ಡ ಶಕ್ತಿಯಾಗಿದ್ದರು ಎಂದರು.
ಉಪೇಂದ್ರ ಕಾಮತರ ಪುತ್ರ ಸುಧಾಕರ ಕಾಮತ್ ಮಾತನಾಡಿ, 1973ರಲ್ಲಿ ಕಾಸರಗೋಡಿನಿಂದ ಇಲ್ಲಿಗೆ ಬಂದಾಗ ನನಗೆ ಹತ್ತು ವರ್ಷ. ಆಗ ತಂದೆಯವರು ಒಬ್ಬರೇ ಕಷ್ಟ ಪಡುವುದನ್ನು ನಾನು ಕಂಡದ್ದೇನೆ. ಅವರ ಧೈರ್ಯ ಮತ್ತು ಸ್ಥಿತಪ್ರಜ್ಞತೆ ನಮಗೆ ಆದರ್ಶವಾಗಿದೆ. ಉದ್ಯಮ ನಡೆಸುವ ಬಗ್ಗೆ ಅವರು ಅತ್ಯುತ್ತಮ ಮಾರ್ಗದರ್ಶಕರು ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ಕಾರ್ಕಳದ ಬೋಳ ಪ್ರಭಾಕರ ಕಾಮತ್ , ನಾಗೇಶ್ ಕಿಣಿ, ಪ್ರಮೋದ್ ಕಾಮತ್, ಪ್ರಸಾದ್ ಕಾಮತ್, ಡಾ. ಮಯೂರ್ ಕಾಮತ್, ಕಾರ್ಮಿಕರ ಪರವಾಗಿ ಶ್ರೀಮತಿ ಲೀಲಾವತಿ, ಶ್ರೀಮತಿ ರೇವತಿ ಅವರು ದಿ. ಉಪೇಂದ್ರ ಕಾಮತರ ಕುರಿತು ಮಾತನಾಡಿ, ನುಡಿನಮನ ಸಲ್ಲಿಸಿದರು.
ವೇದಿಕೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಗಿರಿಧರ ಕಾಮತ್ ಕಾಸರಗೋಡು ಉಪಸ್ಥಿತರಿದ್ದರು.ಸಂಸದ ನಳಿನ್ ಕುಮಾರ್ ಕಟೀಲು ಅವರು ಆಗಮಿಸಿ ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಉಪೇಂದ್ರ ಕಾಮತ್ ಅವರ ಧರ್ಮಪತ್ನಿ ಶ್ರೀಮತಿ ಪದ್ಮಾವತಿ ಕಾಮತ್, ಸೊಸೆ ಶ್ರೀಮತಿ ಶುಭ ಎಸ್. ಕಾಮತ್, ಮೊಮ್ಮಕ್ಕಳಾದ ಡಾ. ಸಿಂಧೂ ಕಾಮತ್, ಡಾ. ಮಯೂರ್ ಕಾಮತ್, ಶ್ರೀಮತಿ ಸುಮನ್ ಕಾಮತ್, ವಿಕ್ರಂಸಿಂಹ ನಾಯಕ್ ಸೇರಿದಂತೆ ಪ್ರಮುಖರಾದ
ಗಿರೀಶ್ ಭಾರದ್ವಾಜ್, ಬಲರಾಮ ಆಚಾರ್ಯ, ಅಣ್ಣಾ ವಿನಯಚಂದ್ರ, ಡಾ. ಪ್ರಭಾಕರ ಶಿಶಿಲ, ಜಗದೀಶ್ ಪೈ ಕಾರ್ಕಳ, ಶ್ರೀನಿವಾಸ ಪೈ ಪುತ್ತೂರು, ಸುರೇಶ್ ಪಕ್ಕಳ, ಗಣಪತಿ ಭಟ್, ಗೌರಿಶಂಕರ, ಹೆಬ್ರಿ ಬಾಲಕೃಷ್ಣ ಮಲ್ಯ, ಅಡ್ಡಂತಡ್ಕ ದೇರಣ್ಣ ಗೌಡ, ನಿತ್ಯಾನಂದ ಮುಂಡೋಡಿ, ಮಧುಸೂದನ್ ಕುಂಭಕೋಡು, ಪಿ.ಸಿ.ಜಯರಾಮ, ಪಿ.ಎಸ್.ಗಂಗಾಧರ, ಎಂ.ಬಿ.ಸದಾಶಿವ, ಜಯರಾಮ ರೈ, ಡಾ. ಚಂದ್ರಶೇಖರ ದಾಮ್ಲೆ ಹರೀಶ್ ಕಂಜಿಪಿಲಿ, ಎಸ್.ಎನ್. ಮನ್ಮಥ, ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ಮೊದಲಾದವರು ಸೇರಿದಂತೆ ಅನೇಕ ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಖಂಡರುಗಳು, ಉದ್ಯಮಿಗಳು, ಕಾರ್ಖಾನೆಯ ಸಿಬ್ಬಂದಿಗಳು, ಕಾರ್ಮಿಕರು, ವಿವೇಕಾನಂದ ವಿದ್ಯಾಸಂಸ್ಥೆಯ ಶಿಕ್ಷಕ ವೃಂದ, ಹಾಗೂ ಉಪೇಂದ್ರ ಕಾಮತರ ಹಿತೈಷಿಗಳು, ಅಭಿಮಾನಿಗಳು ಉಪಸ್ಥಿತರಿದ್ದರು.
ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಿರೀಶ್ ಕುಮಾರ್ ವೈಯಕ್ತಿಕ ಗೀತೆ ಹಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹಸೇವಾ ಪ್ರಮುಖ್ ನ.ಸೀತಾರಾಮ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.