ಸುಳ್ಯ:ಏಪ್ರಿಲ್ ತಿಂಗಳಲ್ಲಿ ಅನುದಾನ ಬಿಡುಗಡೆ ಆಗಿದ್ದರೂ, ಜನವರಿ ಮುಗಿದರೂ ಯಾಕೆ ಅನುದಾನ ಖರ್ಚು ಮಾಡಿಲ್ಲ, ಕಾಮಗಾರಿ ಮಾಡದೆ, ಅನುದಾನ ಖರ್ಚು ಮಾಡದೆ ಏನು ಮಾಡುತ್ತಾ ಇದ್ದೀರಿ ಎಂದು ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳನ್ನು ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ ಖಡಕ್ ಆಗಿ ಪ್ರಶ್ನಿಸಿದ ಘಟನೆ ನಡೆದಿದೆ. ಸುಳ್ಯ ತಾಲೂಕಿನ
ಬಹುತೇಕ ಇಲಾಖೆಗಳಲ್ಲಿ ಅನುದಾನ ಖರ್ಚು ಮಾಡುವುದರಲ್ಲಿ ಹಿನ್ನಡೆಯಾಗಿದೆ. ಕಳೆದ ವರ್ಷ ಏಪ್ರಿಲ್, ಜೂನ್ ತಿಂಗಳಲ್ಲಿ ಅನುದಾನ ಬಿಡುಗಡೆ ಆಗಿದ್ದರೂ ಕೆಲವು ಇಲಖೆಗಳು ಇನ್ನೂ ಟೆಂಡರ್ ಮಾಡದೆ ಪ್ರಗತಿ ಸಾಧಿಸದ ಬಗ್ಗೆ ಅವರು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು. ಇಲಾಖೆಗಳ ಕಾಮಗಾರಿ ಪ್ರಗತಿ ಹಿನ್ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಫೆಬ್ರುವರಿ ಎರಡನೇ ವಾರದೊಳಗೆ ಶೇ.80ರಷ್ಟು ಭೌತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಬೇಕು. ಮುಂದಿನ ಸಭೆಯ ವೇಳೆಗೆ ಸರಿಯಾದ ಪ್ರಗತಿ ಸಾಧಿಸದಿದ್ದರೆ ಅಂತಹಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.ಮಂಜೂರಾದ ವಿವಿಧ ಅಭಿವೃದ್ಧಿ

ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೂಡಲೇ ಪೂರ್ತಿ ಮಾಡಬೇಕು ಇಂಜಿನಿಯರ್ಗಳು ಪರಿಶೀಲನೆ ಮಾಡಿ ಕಾಮಗಾರಿಯ ಪ್ರಗತಿಯ ಬಗ್ಗೆ ವರದಿ ನೀಡಬೇಕು. ಅನುದಾನ ಲ್ಯಾಪ್ಸ್ ಆಗದಂತೆ ಪ್ರತಿಯೊಂದು ಕಾಮಗಾರಿ ಪೂರ್ತಿ ಮಾಡಿ ಸಮಾಜಕ್ಕೆ ಸಮರ್ಪಣೆ ಮಾಡಿ ಎಂದರು. ಎಲ್ಲಾ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿ ಕೊಡಿ ಅವರು ಹೇಳಿದರು.94ಸಿ, ಅಕ್ರಮ ಸಕ್ರಮ ಕಡತಗಳನ್ನು ವಿಲೇವಾರಿ ಮಾಡಲು ತ್ವರಿತ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಜನರನ್ನು ಅಲೆದಾಡಿಸಬಾರದು ಎಂದು ಆಡಳಿತಾಧಿಕಾರಿ ಜಯಲಕ್ಷ್ಮಿ ರಾಯಕೋಡ ಸೂಚಿಸಿದರು. ಸಭೆಗೆ ಹಾಜರಾಗದ ಇಲಾಖಾ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ಕಳಿಸುವಂತೆ ಅವರು ಸೂಚಿಸಿದರು.

ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡ- ಕ್ರಮಕ್ಕೆ ಸೂಚನೆ:
ಶಿಥಿಲಾವಸ್ಥೆಯಲ್ಲಿರುವ ಶಾಲೆ ಮತ್ತು ಅಂಗನವಾಡಿ ಕಟ್ಟಡಗಳನ್ನು ಪರಿಶೀಲನೆ ಮಾಡಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಸುಳ್ಯ ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲಾ, ಅಂಗನವಾಡಿ ಕಟ್ಟಡಗಳ ಪರಿಶೀಲನೆ ನಡೆಸಿ ಸುರಕ್ಷತಾ ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ಶಿಥಿಲಗೊಂಡ ಕಟ್ಟಡಗಳ ತೆರವಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಗ್ರೇಡ್ 2 ತಹಶೀಲ್ದಾರ್ ಮಂಜುನಾಥ್ ಎಂ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.