ಸುಳ್ಯ:ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ವಿಚಾರವನ್ನು ಮುಂದಿಟ್ಟು ಪಕ್ಚದೊಳಗೆ ಗೊಂದಲ ಸೃಷ್ಠಿಸಬೇಡಿ,ಕೆಪಿಸಿಸಿ ಅಧ್ಯಕ್ಷರು ಮಾಡಿದ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾರೇ ಆದರೂ ಪಕ್ಷಕ್ಕೆ ಬಂದ ಮೇಲೆ ಅವರು ಕಾಂಗ್ರೆಸ್ನವರು, ಅವರ ಸಾಮರ್ಥ್ಯಕ್ಕೆ ತಕ್ಕಂತೆ ಅವರಿಗೆ ಪಕ್ಷದಲ್ಲಿ ಹುದ್ದೆಗಳನ್ನು ನೀಡಲಾಗುತ್ತದೆ.ರಾಧಾಕೃಷ್ಣ ಬೊಳ್ಳೂರು ಹಲವಾರು
ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು ಕೆಲ ಕಾಲ ಬಿಜೆಪಿಗೆ ಹೋದರೂ ಮತ್ತೆ ಕಾಂಗ್ರೆಸ್ ಪಕ್ಷ ಸೇರಿ ಕೆಲಸ ಮಾಡುತ್ತಿದ್ದಾರೆ. ಪಕ್ಷವನ್ನು ಮುನ್ನಡೆಸಲು ಅವರು ಸಮರ್ಥರಿದ್ದಾರೆ.ಅದನ್ನು ಗುರುತಿಸಿಯೇ ಕೆಪಿಸಿಸಿ ಅವರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಇದೀಗ ಸಣ್ಣ ಪುಟ್ಟ ವಿಚಾರಗಳನ್ನು ಮುಂದಿಟ್ಟು ಗೊಂದಲ ಸೃಷ್ಠಿಸುವುದು ಸರಿಯಲ್ಲ. ಪರಸ್ಪರ, ಪ್ರೀತಿ ವಿಶ್ವಾಸದಿಂದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಅಧಿಕಾರ, ಸ್ಥಾನಮಾನ ಯಾರಿಗೂ ಶಾಶ್ವತ ಅಲ್ಲ. ಪಕ್ಷದ ಹುದ್ದೆಗಳಿಗೆ ಹೊಸಬರು ಬರಲಿ ಅವರಿಗೆ ಬೆಂಬಲ ನೀಡಬೇಕು. ಬಿಜೆಪಿ ಎಂಬ ಆನೆಯ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಮೊಲದ ಮರಿಗಳಂತೆ ಗುಂಪುಗಳಾಗಬಾರದು ಎಂದು ಅವರು ಹೇಳಿದರು. ಬೊಳ್ಳೂರು ಅವರ ಅಧ್ಯಕ್ಷತೆಗೆ ಶಿಫಾರಸ್ಸು ಮಾಡಲು ಹೋದವರೇ ಈಗ ವಿರೋಧಿಸುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂದು ಅವರು ಹೇಳಿದರು.
ಎಲ್ಲಾ ಸಣ್ಣಪುಟ್ಟ ಗೊಂದಲಗಳನ್ನು ಕೆಪಿಸಿಸಿ ಸರಿಪಡಿಸಲಿದೆ ಎಂದು ಅವರು ಹೇಳಿದರು.