ಸುಳ್ಯ: 2024ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಮಾ.25ರಿಂದ ಆರಂಭಗೊಂಡು ಎ.6ರವರೆಗೆ ನಡೆಯಲಿದೆ.1985 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ತಾಲೂಕಿನಲ್ಲಿ 6 ಪರೀಕ್ಷಾ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ, ಸುಳ್ಯ ಗಾಂಧಿನಗರ ಕೆ.ಪಿ.ಎಸ್, ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ,ಅರಂತೋಡು ಎನ್ಎಂಪಿಯುಸಿ, ಬೆಳ್ಳಾರೆ ಕೆ.ಪಿ.ಎಸ್. ಹಾಗೂ
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ ಪರೀಕ್ಷಾ ಕೇಂದ್ರಗಳಾಗಿವೆ.ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಒಟ್ಟು 36 ಪ್ರೌಢಶಾಲೆಗಳಿಂದ ಒಟ್ಟು 1808 ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆ ಬರೆಯಲಿದ್ದಾರೆ. ಉಳಿದಂತೆ ಖಾಸಗಿಯಾಗಿ ಹಾಗೂ ಈ ಹಿಂದೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಅನುತೀರ್ಣರಾದ ವಿದ್ಯಾರ್ಥಿಗಳು ಸೇರಿ 177 ಮಂದಿ ಪರೀಕ್ಷೆ ಬರೆಯಲಿದ್ದು, ಒಟ್ಟು 1985 ಮಂದಿ ಪರೀಕ್ಷೆ ಬರೆಯಲಿದ್ದಾರೆ.ಪರೀಕ್ಷೆಗಳು ಪ್ರತಿ ದಿನ ಬೆಳಗ್ಗೆ 10.15ಕ್ಕೆ ಆರಂಭಗೊಳ್ಳಲಿದ್ದು, ಎಲ್ಲಾ ವಿದ್ಯಾರ್ಥಿಗಳು
10ಗಂಟೆಯ ಒಳಗಾಗಿ ಪರೀಕ್ಷೆ ನಡೆಯುವ ಕೇಂದ್ರದ ಒಳಗಡೆ ಉಪಸ್ಥಿತರಿರಬೇಕು. ಪ್ರತಿ ದಿನ ಪ್ರತಿ ವಿಷಯಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಓದಲು 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಒಟ್ಟು ಪರೀಕ್ಷೆ ಬರೆಯಲು 3 ಗಂಟೆ ನೀಡಲಾಗುತ್ತದೆ.ಮಾ.25ರಂದು ಪ್ರಥಮ ಭಾಷೆ ಪರೀಕ್ಷೆ ನಡೆಯಲಿದೆ.
ರಾಜ್ಯಾದ್ಯಂತ 2,750 ಕೇಂದ್ರಗಳಲ್ಲಿ ಪರೀಕ್ಷೆಯು ನಡೆಯಲಿದೆ. ಒಟ್ಟು 8,69,968 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.